ಕಾಸರಗೋಡು: ಜನಪ್ರತಿನಿಧಿಗಳ ಪಕ್ಷತೀತ ನಿಲುವು ಹಾಗೂ ಸರ್ಕಾರಿ ಅಧಿಕಾರಿಗಳ ಸಾಮೂಹಿಕ ಶ್ರಮದ ಫಲವಾಗಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ಖಚಿತಪಡಿಸಿಕೊಳ್ಳುವುದು ರ್ಸಾಧ್ಯವಾಗಿದೆ ಎಂದು ಶಾಸಕ ಎಂ. ರಾಜಗೋಪಾಲನ್ ತಿಳಿಸಿದ್ದಾರೆ.
ಅವರು ಆಹಾರ ಸುರಕ್ಷತಾ ಕಾಯ್ದೆ 2013ಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಹಾರ ಸುರಕ್ಷತಾ ಕಾಯ್ದೆಯನ್ವಯ ನಡೆದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆಯಲ್ಲಿ ಮಾತನಾಡಿದರು.
ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಪಿ ಅಖಿಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಆಹಾರ ಸುರಕ್ಷಾ ವ್ಯವಸ್ಥೆ ಬಗ್ಗೆ ದೂರುಗಳು ಗಣನೀಯವಾಗಿ ಕಡಿಮೆಯಾಘಿದ್ದು, ಕೆಲವೊಂದು ದೂರುಗಳಿಗೆ ತಕ್ಷಣದಲ್ಲಿ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದರು. ರಾಜ್ಯ ಆಹಾರ ಸುರಕ್ಷಾ ಆಯೋಗದ ಸದಸ್ಯ ವಿ.ರಮೇಶನ್ ಮಾತನಾಡಿ, ಸರ್ಕಾರ ಮತ್ತು ರಾಜ್ಯ ಆಹಾರ ಸುರಕ್ಷಾ ಆಯೋಗದ ನಿರಂತರ ಮಧ್ಯಸ್ಥಿಕೆಯಿಂದ ಜನರಿಗೆ ಗಣಮಟ್ಟದ ಪಡಿತರ ಅಕ್ಕಿ ಒದಗಿಸಲು ಸಾಧ್ಯವಾಗಿರುವುದಾಗಿ ತಿಳಿಸಿದರು.
ಸಂಸದರ ಪ್ರತಿನಿಧಿ ವಕೀಲ ಸೋಜನ್.ಜೆ. ಕುನ್ನಲ್ ಉಪಸ್ಥಿತರಿದ್ದರು. ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಕೆ.ಎನ್. ಬಿಂದು ವರದಿ ಮಂಡಿಸಿದರು. ಮಂಜೇಶ್ವರ ತಾಲ್ಲೂಕು ಸರಬರಾಜು ಅಧಿಕಾರಿ ಕೆ.ಎಂ. ಶಾಜು ಸ್ವಾಗತಿಸಿದರು. ಟಿ.ನಂದೀಶ್ ವಂದಿಸಿದರು.


