ಲಂಡನ್: ಅಮೆರಿಕದಲ್ಲಿ ನೆಲಸಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಪ್ರೊಫೆಸರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಇಂಗ್ಲೆಂಡ್‌ನ ರಾಯಲ್ ಅಸ್ಟ್ರೊನಾಮಿಕಲ್ ಸೊಸೈಟಿಯ (ಆರ್‌ಎಎಸ್) ಚಿನ್ನದ ಪದಕ ಲಭಿಸಿದೆ.
ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಂಶೋಧನೆಗಳನ್ನು ಕೈಗೊಂಡಿರುವ ಶ್ರೀನಿವಾಸ್ ಕುಲಕರ್ಣಿ ಅವರು, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಸಹೋದರ.
ಮಹಾರಾಷ್ಟ್ರದಲ್ಲಿ ಜನಿಸಿರುವ ಕುಲಕರ್ಣಿ ಅವರು, ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಖಗೋಳ ವಸ್ತುಗಳು ಮತ್ತು ಗಾಮಾ ಕಿರಣಗಳ ಸ್ವಯಂಸ್ಫೋಟ ಸೇರಿದಂತೆ ಖಗೋಳ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.
'ಖಗೋಳ ಭೌತಶಾಸ್ತ್ರದಲ್ಲಿ ಕ್ಷಣಿಕ ಬಹುತರಂಗಾಂತರದ ಕುರಿತಾದ ಸುಸ್ಥಿರ, ನವೀನ ಮತ್ತು ಅಭೂತಪೂರ್ವ ಅನ್ವೇಷಣೆ'ಯ ಕೊಡುಗೆಯನ್ನು ಚಿನ್ನದ ಪದಕ ಆಯ್ಕೆಗೆ ಪರಿಗಣಿಸಲಾಗಿದೆ.
1984ರಿಂದಲೂ ರಾಯಲ್ ಸಂಸ್ಥೆಯು ಚಿನ್ನದ ಪದಕವನ್ನು ನೀಡುತ್ತಿದೆ. ಖ್ಯಾತ ವಿಜ್ಞಾನಿಗಳಾದ ಸ್ಟೀಪನ್ ಹಾಕಿಂಗ್, ಜಾಸ್‌ಲಿನ್ ಬೆಲ್ ಬರ್ನೆಲ್, ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಎಡ್ವಿನ್ ಹಬಲ್ ಅವರು ಈ ಪದಕ ಪಡೆದಿದ್ದಾರೆ. ಇವರ ಸಾಲಿಗೆ ಕುಲಕರ್ಣಿ ಸೇರಿದ್ದಾರೆ.
'ಈ ಪದಕವನ್ನು ಪಡೆದ ಖ್ಯಾತನಾಮರ ಪಟ್ಟಿಗೆ ನನ್ನನ್ನು ಸೇರಿಸಿರುವುದು ನನಗೆ ಆಶ್ವರ್ಯವಾಗಿದೆ. ಇದು ನನ್ನ ಜೀವನದಲ್ಲಿ ಅತ್ಯಂತ ಖುಷಿಕೊಡುವಂಥದ್ದು' ಎಂದು ಕುಲಕರ್ಣಿ ಅವರು ಸಂತಸ ಹಂಚಿಕೊಂಡಿದ್ದಾರೆ.
2024ರಲ್ಲಿ ಖಗೋಳ ಕ್ಷೇತ್ರದ ಅನ್ವೇಷಣೆಗಾಗಿ 'ಶಾ' ಪುರಸ್ಕಾರವನ್ನೂ (ಹಾಂಕಾಂಗ್ ನೀಡುವ ಪ್ರಶಸ್ತಿ) ಕುಲಕರ್ಣಿ ಪಡೆದಿದ್ದಾರೆ. ಖಗೋಳ ವಿಜ್ಞಾನದ ಸಾಧನಗಳ ಅನ್ವೇಷಕರಾಗಿರುವ ಕುಲಕರ್ಣಿ ಅವರು, ಈವರೆಗೆ 10 ಸಾಧನಗಳನ್ನು ರೂಪಿಸಿದ್ದಾರೆ.
ಸದ್ಯ ಕುಲಕರ್ಣಿ ಅವರು ನಾಸಾದ ನೇರಳಾತೀತ ಕಿರಣಗಳ ಅನ್ವೇಷಣೆಗೆ ಸಂಬಂಧಿಸಿದ (ಯುವಿಎಕ್ಸ್) ಸಂಶೋಧನೆಯ ಕಾರ್ಯಯೋಜನೆಯ ಭಾಗವಾಗಿದ್ದಾರೆ. ನೇರಳಾತೀತ ಕಿರಣಗಳ ಕುರಿತಾದ ಅತ್ಯಂತ ಸೂಕ್ಷ್ಮ ಸಂಶೋಧನೆ ಇದಾಗಿದೆ.
ಕುಲಕರ್ಣಿ ಅವರು 1978ರಲ್ಲಿ ದೆಹಲಿಯ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (ಐಐಟಿ) ಸ್ನಾತಕೋತ್ತರ ಪದವಿ, 1983ರಲ್ಲಿ ಬಾರ್ಕ್‌ಲೆಯಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

