ಕುಂಬಳೆ: ಎಲೆಗಳನ್ನು ಮರೆಮಾಡುವಂತೆ ಹೂವುಗಳಿಂದ ಕಂಗೊಳಿಸುವ ಮಾಮರಗಳು ಈ ಬಾರಿ ಜನರನ್ನು ಹೆಚ್ಚು ಖುಷಿಗೊಳಿಸುತ್ತಿದೆ. ಹಳ್ಳಿ ಅಥವಾ ನಗರಗಳೆಂದು ವ್ಯತ್ಯಾಸಗಳಿಲ್ಲದೆ ಎಲ್ಲೆಡೆ ಈ ಬಾರಿ ಮಾವಿನ ಮರಗಳು ಹೂ ಬಿಟ್ಟು ನಳನಳಿಸುತ್ತಿವೆ. ಸ್ಥಳೀಯ ಮಾವಿನ ಮರಗಳ ಹೂಬಿಡುವಿಕೆ ನೋಡಲು ಒಂದು ಅದ್ಭುತ ದೃಶ್ಯ. ಈ ಋತುವಿನಲ್ಲಿ, ಮಾವಿನ ಹಣ್ಣುಗಳು ವರ್ಷಾಗಳಿಗಿಂತ ಹೆಚ್ಚು ಹೆಚ್ಚು ಹೂಬಿಟ್ಟಿವೆ. ವರ್ಷಗಳಿಂದ ಅರಳದ ಮಾವುಗಳು ಈ ಬಾರಿ ಅರಳಿವೆ. ಇವೆಲ್ಲವೂ ಫಲ ನೀಡಿದರೆ, ಇತ್ತೀಚಿನ ದಿನಗಳಲ್ಲಿ ಇದು ಅತ್ಯುತ್ತಮ ಮಾವಿನ ಕಾಲವಾಗಿರುತ್ತದೆ.
ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಮಾವಿನ ಹೂವುಗಳು ಹೇರಳವಾಗಿರಲು ಸಹಾಯ ಮಾಡಿವೆ. ಹಗಲಿನಲ್ಲಿ ಸ್ಪಷ್ಟ ಶುಭ್ರ ಬಿಸಿಲಿನ ಆಗಸ ಮತ್ತು ರಾತ್ರಿಯಲ್ಲಿ ನಿರಂತರ ತಂಪಾಗಿರುವುದು ಮಾವಿನ ಕಾಲಕ್ಕೆ ಭರವಸೆ ನೀಡುತ್ತದೆ. ಆದರೆ ಮಾವಿನ ಹೂವುಗಳು ಅರಳಿದರಷ್ಟೇ ಸಾಲದು, ಹಾತೊರೆಯುವಿಕೆಗೆ ಕಲಶ ನೀಡುವುದು ಅದು ಮಿಡಿಯಾಗಿ ಬಳಿಕ ಇಡಿಯಾಗಿ ಹಣ್ಣುಗಳಾಗುವಾಗ. ಮಾವಿನ ಮಾಧುರ್ಯವನ್ನು ಆನಂದಿಸಲು ಹವಾಮಾನವು ಸೌಮ್ಯವಾಗಿರಬೇಕು. ಪುಟ್ಟ ಮಳೆಯ ಸಾಧ್ಯತೆ ಹೆಚ್ಚಿರುವ ಸಮಯ ಇದು. ಹಾಗೆ ಸಂಭವಿಸಿದರೆ, ಭರವಸೆಗಳು ಭಗ್ನವಾಗುತ್ತವೆ. ವಾತಾವರಣವು ಮೋಡ ಕವಿದಿದ್ದರೆ, ರಸವನ್ನು ಹೀರುವ ಕೀಟಗಳು ಹೂವುಗಳನ್ನು ನಾಶಗೊಳಿಸುವ ಸಾಧ್ಯತೆಯಿದೆ ಎಂದು ಕೃಷಿ ತಜ್ಞರು ಹೇಳುತ್ತಾರೆ.
ಗ್ರಾಮೀಣ ರಸ್ತೆಗಳ ಉದ್ದಕ್ಕೂ ಇರುವ ಎಲ್ಲಾ ಮಾವಿನ ಮರಗಳು ಹೂವುಗಳಿಂದ ತುಂಬಿ ಪ್ರಯಾಣಿಕರನ್ನು ಸ್ವಾಗತಿಸುತ್ತವೆ. ದಶಕಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತರವಾಗಿ ನಿಂತಿದ್ದ ಮಾವಿನ ಮರಗಳು ಹೆದ್ದಾರಿ ಅಗಲೀಕರಣದ ಭಾಗವಾಗಿ ಧರಾಶಾಯಿಯಾಗಿ ಅವೆಲ್ಲ ಇನ್ನಿಲ್ಲವಾಗಿವೆ. ಕಣ್ಮರೆಯಾಗಿರುವ ಮಾವಿನ ಮರಗಳಲ್ಲಿ ಹೆಚ್ಚಿನವು ವೈವಿಧ್ಯಮಯ ಸುವಾಸನೆಯನ್ನು ಹೊಂದಿರುವ ಮರಗಳಾಗಿದ್ದವು. ಇದೇ ವೇಳೆ, ಪ್ರಕೃತಿ ಪ್ರಿಯರು ಸ್ಥಳೀಯ ಮಾವಿನ ತಳಿಗಳನ್ನು ರಕ್ಷಿಸಲು ಪ್ರಯತ್ನಗಳನ್ನು ಮಾಡುತ್ತಿರುವುದು ಸಮಾಧಾನಕರ ಸಂಗತಿ. ಸ್ಥಳೀಯ ಮಾವಿನ ಋತುವು ಜೂನ್ ವರೆಗೆ ಇರುವುದು ವಾಡಿಕೆ.
ಮುನಿಸು ತರವೇ..?
ಈ ಮಧ್ಯೆ ಅಚ್ಚರಿ ಎಂಬಂತೆ ಮಧೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅವರ ಹಿತ್ತಿಲಿನಲ್ಲಿ(ಕಾಸರಗೋಡು-ಮಧೂರು ರಸ್ತೆ) ಎಲ್ಲಾ ವರ್ಷ ಹೂಬಿಡುವ ಮಾಮರ ಈ ವರ್ಷ ಹೂಬಿಡದೆ ಕುತೂಹಲ ಮೂಡಿಸಿದೆ. ಎಲ್ಲೆಡೆ ಮಾವಿನ ಮರಗಳು ಗಿಡಗಳನ್ನೂ ಬಿಡದೆ ಹೂಬಿಟ್ಟಿರುವಾಗ ಈ ಒಂದು ಮಾಮರ ಹೂಬಿಡದೆ ನಿಂತಿರುವುದು ಯಾಕೆಂದು ಎಲ್ಲರ ಗಮನ ಸೆಳೆಯುತ್ತಿದೆ.


.jpg)
.jpg)
.jpg)
