ಕೊಚ್ಚಿ: ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನದ ದಿನ ಸಮೀಪಿಸುತ್ತಿದ್ದಂತೆ ಭಕ್ತಾದಿಗಳ ದಟ್ಟಣೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ಹೈಕೋರ್ಟಿನ ದೇವಸ್ವಂ ಬೆಂಚ್ ಕಟ್ಟುನಿಟ್ಟಿನ ಆದೇಶ ನಿಡಿದೆ.
ಮಕರಜ್ಯೋತಿ ದಿನವಾದ ಜ.14ರಂದು ವರ್ಚುವಲ್ ಕ್ಯೂ ಮೂಲಕ 30ಸಾವಿರ ಮಂದಿಗೆ ಅವಕಾಶ ಕಲ್ಪಿಸಲಾಘಿದ್ದರೆ, ಜ. 13ರಂದು ಈ ಸಂಖ್ಯೆ 35ಸಾವಿರಕ್ಕೆ ನಿಗದಿಪಡಿಸಲಾಘಿದೆ. 15ರಿಂದ 18ರ ವರೆಗೆ ಪ್ರತಿದಿನ 50ಸಾವಿರ ಮಂದಿಗೆ, 19ರಂದು 30ಸಾವಿರ ಮಂದಿಗೆ ವರ್ಚುವಲ್ ಪಾಸ್ ನೀಡುವಂತೆಯೂ ಹೈಕೋರ್ಟು ಬೆಂಚ್ ತಿಳಿಸಿದೆ. ಪಾಸ್ ಹೊಂದದವರಿಗೆ ಹಾಗೂ ತಾರೀಕು ಮತ್ತು ಸಮಯ ತಪ್ಪಿಸಿ ಬರುವವರಿಗೂ ಪ್ರವೇಶ ನೀಡದಿರುವಂತೆಯೂ ನ್ಯಾಯಾಲಯ ದೇವಸ್ವಂ ಬೆಂಚ್ ಸೂಚಿಸಿದೆ. ಭಕ್ತಾದಿಗಳುಗೆ ಲಘು ಉಪಾಹಾರ, ಶುದ್ಧ ನೀರು, ಅನ್ನದಾನ ಖಚಿತಪಡಿಸಿಕೊಳ್ಳಬೇಕು. ಜ. 13 ಹಾಗೂ 14ರಂದು ಎರುಮೇಲಿಯ ಪಾರಂಪರಿಕ ಅರಣ್ಯ ಹಾದಿ ಮೂಲಕ 1ಸಾವಿರ ಮಂದಿಗೆ, ಸತ್ರಂ ಪುಲ್ಲುಮೇಡ್ ಮೂಲಕ 1500ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಅಪ್ಪಾಚಿಮೇಡ್-ಬೆಯ್ಲೀ ಬ್ರಿಡ್ಜ್ ಕಾನನ ಹಾದಿಮೂಲಕ ಯಾರಿಗೂ ಪ್ರವೇಶಾನುಮತಿ ಕಲ್ಪಿಸುವುದಿಲ್ಲ ಎಂಬ ಬಗ್ಗೆ ಅರಣ್ಯ ಇಲಾಖೆ ಖಚಿತಪಡಿಸಬೇಕು. ಮಕರಜ್ಯೋತಿ ದರ್ಶನಕ್ಕಾಗಿ ಪುಲ್ಲುಮೇಡ್ ಪ್ರದೇಶದಲ್ಲಿ 5ಸಾವಿರಕ್ಕಿಂತ ಹೆಚ್ಚು ಮಂದಿಯನ್ನು ಪ್ರವೇಶಿಸದಿರುವಂತೆ ನೋಡಿಕೊಳ್ಳಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ಮಕರಜ್ಯೋತಿ ದರ್ಶನವಾಗುವ ಜ. 14ರಂದು ಬೆಳಗ್ಗೆ 10ರಿಂದ ನೀಲಕ್ಕಲ್‍ನಿಂದ ಪಂಪೆಗೆ ಹಾಗೂ 11ರಿಂದ ಪಂಪೆಯಿಂದ ಸನ್ನಿಧಾನಕ್ಕೂ ಭಕ್ತಾದಿಗಳ ಪ್ರವೇಶ ನಿಷೇಧಿಸಲಾಗಿದೆ. ಶ್ರೀ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಲಿರುವ ಪವಿತ್ರ ಆಭರಣಗಳ ಸ್ವಾಗತ ಹಾಗೂ ದೇಗುಲ ಶುಚೀಕರಣದ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರಿಂದ ಸನ್ನಿಧಾಣದಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಏರ್ಪಡಿಸಲಾಗಿದೆ. ಅಂದು ಸಂಜೆ 6ರಿಂದ 7ರ ವರೆಗೆ ಮಾಧ್ಯಮ ಪ್ರತಿನಿಧಿಗಳಿಗೂ ನಿಯಂತ್ರಣವಿರಲಿದೆ. ಪ್ರತಿಯೊಂದು ಸುದ್ದಿಮಾಧ್ಯಮದಿಂದ ಇಬ್ಬರು ಅಕ್ರೆಡಿಟೇಶನ್ ಹೊಂದಿದ ಪ್ರತಿನಿಧೀಗಳಿಗೆ ಮಾತ್ರ ಪ್ರವೇಶಾನುಮತಿಯಿರಲಿದೆ. ಸನ್ನಿಧಾನ ವಠಾರದಲ್ಲಿ ಟ್ರೈಪ್ಯಾಡ್ ಹಾಗೂ ಕೇಬಲ್ ಸಂಪೂರ್ಣ ನಿಷೇಧಿಸಲಾಗಿದೆ. ಮಕರಜ್ಯೋತಿ ದರ್ಶನದ ನಂತರ ಭಕ್ತಾದಿಗಳು ಶೀಘ್ರವಾಗಿ ಬೆಟ್ಟದಿಂದ ಹಿಂತೆರಳಲು ಸಹಾಯವಾಗುವ ರೀತಿಯಲ್ಲಿ ಪಂಪೆಯ ಹಿಲ್‍ಟಾಪ್‍ನಲ್ಲಿ ಅಗತ್ಯವಿದ್ದಲ್ಲಿ ಪಾರ್ಕಿಂಗ್ ನಿಯಂತ್ರಣ ಏರ್ಪಡಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

