ಬದಿಯಡ್ಕ: ಜಿಲ್ಲೆಯ ಉಕ್ಕಿನಡ್ಕದಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಶಿಲಾನ್ಯಾಸಗೊಳ್ಳುತ್ತಿದ್ದಂತೆ ಜಿಲ್ಲೆಯ ಆರೋಗ್ಯ ವಲಯ ಎದುರಿಸುತ್ತಿರುವ ಕೆಲವೊಂದು ಸಮಸ್ಯೆಪರಿಹಾರಗೊಳ್ಳುವ ಭರವಸೆಯೊಂದಿಗೆ ಚಾತಕಪಕ್ಷಿಯಂತೆ ಕಾದುಕುಳಿತಿದ್ದ ಜನತೆಗೆ ಮತ್ತೆ ನಿರಾಶೆ ಎದುರಾಗಿದೆ.
ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಲೇಜು ಆಸ್ಪತ್ರೆ ಪೂರ್ಣಪ್ರಮಾಣದಲ್ಲಿ ತೆರೆದು ಕಾರ್ಯಾಚರಿಸುವ ಭರವಸೆಯಲ್ಲಿದ್ದ ಜನತೆಗೆ 13ವರ್ಷ ಕಳೆದರೂ ಉತ್ತರ ಲಭಿಸದಾಗಿದೆ.
2013 ನವಂಬರ 30ರಂದು ಕೇರಳದ ಅಂದಿನ ಮುಖ್ಯಮಂತ್ರಿ ಊಮನ್ ಚಾಂಡಿ ವೈದ್ಯಕೀಯ ಕಾಲೇರಜು ಆಸ್ಪತ್ರೆಗೆ ಶಿಲಾನ್ಯಾಸ ನಡೆಸಿದ್ದು, 2014-15ರಲ್ಲಿ ಶೈಕ್ಷಣಿಕ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ನಂತರ 2018ರ ನ. 25ರಂದು ಆಸ್ಪತ್ರೆಯ ಬ್ಲಾಕ್ ಕಟ್ಟಡಕ್ಕೆ ಶಿಲಾನ್ಯಾಸ ನಡೆದು, ಆಡಳಿತ ಕಟ್ಟಡ, ವಿದ್ಯಾರ್ಥಿನಿಲಯ, ಅಧ್ಯಾಪಕರ ವಸತಿ ಕಟ್ಟಡ ಕಾಮಗಾರಿ ಬಹುತೇಕ ಪೂರ್ತಿಗೊಂಡರೂ, ಆಸ್ಪತ್ರೆ ಕಟ್ಟಡ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ.
ಈ ಎಲ್ಲಾ ಗೊಂದಲದ ನಡುವೆಯೂ ಆಸ್ಪತ್ರೆಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮೋದನೆ ಲಭಿಸಿದ ಹಿನ್ನೆಲೆಯಲ್ಲಿ ಎಂಬಿಬಿಎಸ್ ತರಗತಿ ಆರಂಭಿಸಲಾಗಿದೆ. ಕಾಮಗಾರಿ ಅರ್ಧದಲ್ಲಿರುವುದರಿಂದ ಎಂಬಿಬಿಎಸ್ ತರಗತಿಯನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಆರಂಭಿಸುವ ಸ್ಥಿತಿ ಎದುರಾಗಿದೆ. ಆಸ್ಪತ್ರೆ ಕಟ್ಟಡ ಪೂರ್ತಿಗೊಳಿಸುವಂತೆ ಆಗ್ರಹಿಸಿ ಹಲವಾರು ಪ್ರತಿಭಟನೆ ನಡೆದಿದೆ. ಆಸ್ಪತ್ರೆ ಕಟ್ಟಡದ ವಿಳಂಬಗತಿಯ ಕಾಮಗಾರಿ ಪ್ರತಿಭಟಿಸಿ ನಾನಾ ಸಂಘಟನೆಗಳು ಹೋರಾಟಕ್ಕಿಳಿಯುತ್ತಿದ್ದರೂ, ಸರ್ಕಾರ ತನ್ನನೀತಿ ಬದಲಿಸುತ್ತಿಲ್ಲ.
ಕಾಸರಗೋಡು ಜಿಲ್ಲೆಯಲ್ಲಿ ಸರ್ಕಾರಿ ವಲಯದಲ್ಲಿ ಉನ್ನತ ಚಿಕಿತ್ಸಾ ಸೌಲಭ್ಯವಿಲ್ಲದಿರುವುದರಿಂದ ಜಿಲ್ಲೆಯ ಬಡ ಹಾಗೂ ಅಶಕ್ತ ರೋಗಿಗಳು ಇತರ ಜಿಲ್ಲೆ ಅಥವಾ ರಾಜ್ಯವನ್ನು ಆಶ್ರಯಿಸಬೇಕಾದ ಅನಿವಾರ್ಯತೆಯಿದೆ.
ವಿಶಿಷ್ಟ ಪ್ರತಿಭಟನೆ:
ಉಕ್ಕಿನಡ್ಕದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸುವಂತೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಆಡಳಿತ ವಿಭಾಗ ಕಟ್ಟಡ ಕಾಮಗಾರಿ ಪೂರ್ತಿಗೊಂಡಿದ್ದು, ಆಸ್ಪತ್ರೆ ಕಟ್ಟಡ ಕೆಲಸ ವಿಳಂಬವಾಗಿ ಸಾಗುತ್ತಿದೆ. ನಿರ್ಮಾಣಹಂತದಲ್ಲಿರುವ ಆಸ್ಪತ್ರೆಯ ಬೃಹತ್ ಕಟ್ಟಡ ಅಕ್ಷರಶ: ಭೂತಬಂಗಲೆಯಂತಾಗಿದ್ದು, ಇತ್ತೀಚೆಗೆ ಐಕ್ಯರಂಗದ ವತಿಯಿಂದ ಆಸ್ಪತ್ರೆಯಲ್ಲಿ ವಿಶಿಷ್ಟ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆಸ್ಪತ್ರೆ ಕಟ್ಟಡದೊಳಗೆ ಒಟ್ಟುಸೇರಿದ ಕಾರ್ಯಕರ್ತರು, ಏಕಾಏಕಿ ಬೊಬ್ಬಿಡುತ್ತಾ ಕಟ್ಟಡದೊಳಗೆ 'ಪ್ರೇತ ಸೇರಿಕೊಂಡಿರುವುದಾಗಿ' ಹೊರಕ್ಕೆ ಧಾವಿಸುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ಆಯೋಜಿಸಿದ್ದರು. ಐಕ್ಯರಂಗದ ಮುಖಂಡರ ಸಹಿತ ಹಲವು ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಚಾಲನೆ:
ಉಕ್ಕಿನಡ್ಕದಲ್ಲಿ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನಡೆಸಿ 13ವರ್ಷ ಸಂದರೂ ಸುಸಜ್ಜಿತ ಮೆಡಿಕಲ್ ಕಾಲೇಜ್ ಕಟ್ಟಡ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ವತಿಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಲಾಗಿದೆ. ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ಸಂಚಾಲಕ, ಜಿ. ಪಂ. ಸದಸ್ಯ ಸೋಮಶೇಖರ್ ಜೆ. ಎಸ್. ಹಾಗೂ ಹೋರಾಟ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದೆ.
ಅಭಿಮತ:
ಜಿಲ್ಲೆಯ ಜನತೆ ಸುಸಜ್ಜಿತ ವೈದ್ಯಕೀಯ ಕಾಲೇಜು ಆಸ್ಪತ್ರೆಗಾಗಿ ಕಳೆದ 13ವರ್ಷಗಳಿಂದ ಕಾಯುತ್ತಿದ್ದರೂ, ಸರ್ಕಾರ ಕಟ್ಟಡ ಕಾಮಗಾರಿ ಪೂರ್ತಿಗೊಳಿಸುವಲ್ಲಿ ತೋರುವ ನಿರ್ಲಕ್ಷ್ಯ ಧೋರಣೆ ಖಂಡಿಸಿ ಹೋರಾಟ ಸಮಿತಿ ಮತ್ತೆ ಹೋರಾಟಕ್ಕೆ ಮುಂದಾಗಿದೆ. ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಸೇರಿದಂತೆ ಜಿಲ್ಲೆಯ ಅನಾರೋಗ್ಯಪೀಡಿತರಿಗೆ ಭರವಸೆಯ ಕೇಂದ್ರವಾಗಬೇಕಾಗಿದ್ದ ವೈದ್ಯಕೀಯ ಕಾಲೇಜು ಆಸ್ಪತ್ರೆ ಶಿಥಿಲಾವಸ್ಥೆಗೆ ತಲುಪದಂತೆ ಸರ್ಕರ ನೋಡಿಕೊಳ್ಳಬೇಕು.
ಮಾಹಿನ್ ಕೇಳೋಟ್, ಅಧ್ಯಕ್ಷ
ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ



