ಬ್ರಸೆಲ್ಸ್: ಸಿರಿವಂತ ಉದ್ಯಮಿ ಇಲಾನ್ ಮಸ್ಕ್ ಅವರ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಚಾಟ್‌ಬಾಟ್ 'ಗ್ರೋಕ್' ಮೂಲಕ ಸಮ್ಮತಿಯಿಲ್ಲದೇ ಮಹಿಳೆ ಮತ್ತು ಮಕ್ಕಳ ಲೈಂಗಿಕ ಅಂಶವುಳ್ಳ ಡೀಪ್‌ಫೇಕ್‌ಗಳನ್ನು ಪ್ರಕಟಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಐರೋಪ್ಯ ಒಕ್ಕೂಟದ ನಿಯಂತ್ರಣ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
'ಗ್ರೋಕ್' ತನ್ನ ಎಐ ಬಳಸಿಕೊಂಡು ಬಳಕೆದಾರರು ಅಪರಿಚಿತ ವ್ಯಕ್ತಿಗಳ ಚಿತ್ರ ರಚನೆ (ಇಮೇಜ್ ಜನರೇಷನ್) ಮತ್ತು ತಿದ್ದುವ (ಎಡಿಟಿಂಗ್) ಅವಕಾಶ ಕಲ್ಪಿಸಿರುವುದು ಜಾಗತಿಕ ಟೀಕೆಗೆ ಗುರಿಯಾಗಿತ್ತು. ಬಿಕಿನಿಗಳಲ್ಲಿ ಮಹಿಳೆಯರು ಪಾರದರ್ಶಕವಾಗಿ ಕಾಣುವಂತೆ ಅಥವಾ ಬಟ್ಟೆ ಕಳಚುತ್ತಿರುವಂತೆ ತೋರಿಸಲಾಗಿತ್ತು. ಕೆಲ ಮಕ್ಕಳ ಚಿತ್ರಗಳೂ ಇದರಲ್ಲಿ ಇದ್ದವು ಎಂದು ತಜ್ಞರು ತಿಳಿಸಿದ್ದರು. ಹೀಗಾಗಿ ಕೆಲ ಸರ್ಕಾರಗಳು ಈ ಸೇವೆಯನ್ನು ನಿಷೇಧಿಸಿದ್ದವು ಮತ್ತು ಎಚ್ಚರಿಕೆಯನ್ನೂ ನೀಡಿದ್ದವು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
'ಎಕ್ಸ್ ವೇದಿಕೆಯು ಅನಧಿಕೃತ ಅಂಶಗಳ ಹರಡುವಿಕೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆಯೇ? ಡಿಜಿಟಲ್ ಸೇವಾ ಕಾಯ್ದೆಯನ್ನು ಗ್ರೋಕ್ ಪಾಲಿಸುತ್ತಿದೆಯೇ? ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ' ಎಂದು 27 ದೇಶಗಳನ್ನು ಒಳಗೊಂಡ ಐರೋಪ್ಯ ಒಕ್ಕೂಟದ ಕಾರ್ಯನಿರ್ವಾಹಕ ತಿಳಿಸಿದ್ದಾರೆ.
ಈ ಮಧ್ಯೆ 'ಎಕ್ಸ್'ನ ವಕ್ತಾರರು ಪ್ರತಿಕ್ರಿಯೆ ನೀಡಿ, 'ಎಕ್ಸ್' ಅನ್ನು ಎಲ್ಲರಿಗೂ ಸುರಕ್ಷಿತ ವೇದಿಕೆಯನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ಲೈಂಗಿಕ ವಿಚಾರದಲ್ಲಿ ಮಕ್ಕಳ ಬಳಕೆ, ಸಮ್ಮತಿಯಿಲ್ಲದ ನಗ್ನತೆ ಮತ್ತು ಅನಗತ್ಯ ಲೈಂಗಿಕ ವಿಚಾರಗಳಲ್ಲಿ ನಾವು ಶೂನ್ಯ ಸಹಿಷ್ಣುಗಳಾಗಿದ್ದೇವೆ' ಎಂದಿದ್ದಾರೆ.

