HEALTH TIPS

ಶಬರಿಮಲೆ ಚಿನ್ನ ನಾಪತ್ತೆ ಹಿಂದಿದೆ ದೊಡ್ಡ ಷಡ್ಯಂತ್ರ!

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪನ ದೇವಸ್ಥಾನ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರ. ಆದರೆ, ಈ ಮಂದಿರದಲ್ಲಿ ನಡೆದ 6 ಕೋಟಿ ರೂಪಾಯಿ ಮೌಲ್ಯದ 4.5 ಕೆ.ಜಿ. ಚಿನ್ನ ಕಳ್ಳತನದ ಪ್ರಕರಣವು ಬೆಚ್ಚಿಬೀಳಿಸಿದೆ, ವಿಶೇಷ ತನಿಖಾ ತಂಡದ ತನಿಖೆಯ ವೇಳೆ ಹಲವು ಮಹತ್ವದ ಮಾಹಿತಿಗಳು ಹೊರಬಂದಿದ್ದು, ಇದರ ಹಿಂದೆ ಅಂತಾರಾಷ್ಟ್ರೀಯ ಚಿನ್ನ ಕಳ್ಳಸಾಗಾಣಿಕೆ ಜಾಲ ಹಾಗೂ ಭೂಗತ ಜಗತ್ತಿನ ಕೈವಾಡವಿರುವ ಸಾಧ್ಯತೆಯ ಬಗ್ಗೆ ಹೇಳಲಾಗಿದೆ.
ವಂಚಕರು, ಮೋಸಗಾರರು ಎಂಥ ಸ್ಥಳಗಳಲ್ಲೂ ತಮ್ಮ ಕುಕೃತ್ಯಗಳನ್ನು ಎಸಗುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಕೇರಳದ ಪ್ರಸಿದ್ಧ ಧಾರ್ವಿುಕ ಕೇಂದ್ರ ಶಬರಿಮಲೆ ಅಯ್ಯಪ್ಪನ ದೇಗುಲದ ಬಾಗಿಲು ಹಾಗೂ ಮೂರ್ತಿಗೆ ಅಳವಡಿಸಿದ್ದ ಚಿನ್ನವೇ ಕಳ್ಳತನವಾಗಿದ್ದು, ಇದರಲ್ಲಿ ಟ್ರಾವಂಕೂರ್ ದೇವಸ್ವಂ ಬೋರ್ಡ್​ನ (ಟಿಡಿಬಿ)ಮಾಜಿ ಅಧಿಕಾರಿಗಳು, ಬೆಂಗಳೂರು ಮೂಲ್ಯದ ಉದ್ಯಮಿ ಷಾಮೀಲಾಗಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್​ಐಟಿ) ಹೈಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. 1998-99ರಲ್ಲಿ ಈ ದ್ವಾರವನ್ನು ಉದ್ಯಮಿ ವಿಜಯ್ ಮಲ್ಯ ಅವರ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗಿತ್ತು. ಈ ಚಿನ್ನಕಳವು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ಇದು ಆಕಸ್ಮಿಕ ಘಟನೆಯಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ಎಸ್​ಐಟಿ ಅಭಿಪ್ರಾಯಪಟ್ಟಿದೆ.
ಇದು ಬರೀ ಚಿನ್ನ ಕಳ್ಳತನದ ಪ್ರಕರಣ ಅಥವಾ ಆರ್ಥಿಕ ಅಪರಾಧಕ್ಕೆ ಸೀಮಿತವಾಗಿಲ್ಲ. ಮಂದಿರದ ಪಂಚಲೋಹದ ನಾಲ್ಕು ಮೂರ್ತಿಗಳನ್ನು ಹೊರಗೆ ಕಳುಹಿಸಿ, ಅವುಗಳನ್ನು ಮೂರ್ತಿ ಕಳ್ಳಸಾಗಾಣಿಕೆ ಜಾಲಕ್ಕೆ ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಚಿನ್ನ ಮತ್ತು ಮೂರ್ತಿ ಕಳ್ಳಸಾಗಾಣಿಕೆದಾರರು, ಕುಖ್ಯಾತ ಅಂತಾರಾಷ್ಟ್ರೀಯ ಅಪರಾಧಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಜಾಲವನ್ನು ಭೇದಿಸಲು ಮತ್ತು ಇದರ ಹಿಂದಿ ರುವ ಸಂಪೂರ್ಣ ಷಡ್ಯಂತ್ರವನ್ನು ಬಯಲಿಗೆ ಎಳೆಯಲು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದೆ.

ಸಂಚು ಬಯಲು

ವಿಶೇಷ ತನಿಖಾ ತಂಡ (ಎಸ್​ಐಟಿ) ತನಿಖೆಯಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸಿತು ಮತ್ತು ಪ್ರಕರಣದ ಒಳಸುಳಿಗಳನ್ನು, ಅದರ ಹಿಂದಿರುವ ಷಡ್ಯಂತ್ರವನ್ನು ಬಯಲು ಮಾಡುವಲ್ಲಿ ಯಶಸ್ವಿಯಾಯಿತು.

ಎಸ್​ಐಟಿ ವರದಿಯ ಪ್ರಮುಖಾಂಶಗಳು

ಇದು ಸಾಧಾರಣವಾದ ಕಳ್ಳತನ ಪ್ರಕರಣವಲ್ಲ. ಯೋಜನಾಬದ್ಧವಾಗಿ ರೂಪಿಸಲಾಗಿದ್ದ ದೊಡ್ಡ ಷಡ್ಯಂತ್ರವಾಗಿತ್ತು.

ಉನ್ನಿಕೃಷ್ಣನ್ ಪೋಟಿ, ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಈ ಸಂಚಿನ ಪ್ರಮುಖ ರೂವಾರಿಗಳು. ತನಿಖಾ ಏಜೆನ್ಸಿಗಳಿಂದ ಪಾರಾಗಲು ಈ ಆರೋಪಿಗಳು ಮೊದಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.
2025ರ ಅಕ್ಟೋಬರ್​ನಲ್ಲಿ ಬೆಂಗಳೂರಿನಲ್ಲಿ ಗುಪ್ತಸಭೆ ನಡೆಸಿ, ಕಳ್ಳತನದ ಸಂಚು ರೂಪಿಸಲಾಗಿತ್ತು. ಮಾತ್ರವಲ್ಲ, ಪೊಲೀಸ್ ಅಥವಾ ತನಿಖಾ ಏಜೆನ್ಸಿಗಳ ಕೈಗೆ ಸಿಲುಕಿದರೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಈ ಸಭೆಯಲ್ಲಿ ರ್ಚಚಿಸಲಾಗಿತ್ತು.
ಎಸ್​ಐಟಿಯ ಮಧ್ಯಂತರ ವರದಿ ಜನವರಿ 19ರಂದು ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.

ಪ್ರಮುಖ ಆರೋಪಿಗಳು

ನಂಬೂದರಿ ಉನ್ನೀಕೃಷ್ಣನ್ ಪೋಟಿ: ದೇಗುಲದ ಅರ್ಚಕರಿಗೆ ಸಹಾಯಕನಾಗಿದ್ದ ಈತ ದ್ವಾರಪಾಲಕ ಮೂರ್ತಿಗಳು ಹಾಗೂ ಗರ್ಭಗೃಹದ ಮುಖ್ಯದ್ವಾರಕ್ಕೆ ಅಳವಡಿಸಿದ್ದ ಚಿನ್ನ ಕಳವು ಮಾಡಿದ ಅರೋಪ ಎದುರಿಸುತ್ತಿದ್ದಾನೆ.

ಡಿ.ಮಣಿ ಅಲಿಯಾಸ್ ಬಾಲಮುರುಗನ್: ಚಿನ್ನ ಮತ್ತು ಇತರ ಬೆಲೆಬಾಳುವ ಲೋಹಗಳ ವ್ಯಾಪಾರಿ. ಮೂರ್ತಿ ಕಳ್ಳಸಾಗಣೆ ಮತ್ತು ಚಿನ್ನ ಕಳ್ಳಸಾಗಣೆಯ ಅಂತಾರಾಷ್ಟ್ರೀಯ ಜಾಲದೊಂದಿಗೆ ಸಂಪರ್ಕ.
ಎ.ಪದ್ಮಕುಮಾರ್: ಟ್ರಾವಂಕೂರ್ ದೇವಸ್ವಂ ಬೋರ್ಡ್​ನ (ಟಿಡಿಬಿ) ಮಾಜಿ ಅಧ್ಯಕ್ಷ. ಇವರ ಅಧಿಕಾರಾವಧಿಯಲ್ಲೇ ದೇಗುಲದ ಗರ್ಭಗೃಹದ ಮುಖ್ಯದ್ವಾರಕ್ಕೆ ಅಳವಡಿಸಲಾಗಿದ್ದ ಚಿನ್ನದ ಲೇಪನಗಳನ್ನು ಹೊರಗಡೆ ಕಳುಹಿಸಲಾಯಿತು.

ಇತರ ಆರೋಪಿಗಳು


1.ಮುರಾರಿ ಬಾಬು 2.ಎನ್.ವಾಸು 3.ಪಂಕಜ್ ಭಂಡಾರಿ 4.ಗೋವರ್ಧನ್ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ: 10

ಬೆಳಕಿಗೆ ಬಂದ ಬಗೆ

ಪೂರ್ವಾನುಮತಿ ಇಲ್ಲದೆ ಒಂದು ದಿನ ಮುಂಚೆಯೇ ಮೂರ್ತಿಗಳಿಂದ ಚಿನ್ನದ ಲೇಪನವನ್ನು ಕಳಚಿ ಚೆನ್ನೈಗೆ ತೆಗೆದುಕೊಂಡು ಹೋಗಲಾಗಿದೆ ಎಂದು ದೇಗುಲದ ವ್ಯವಹಾರಗಳನ್ನು ನೋಡಿಕೊಳ್ಳಲು ಕೇರಳ ಹೈಕೋರ್ಟ್ ನೇಮಿಸಿದ್ದ ವಿಶೇಷ ಆಯುಕ್ತರು 2025ರ ಸೆಪ್ಟೆಂಬರ್ 8ರಂದು ವರದಿ ನೀಡಿದರು. ಬಳಿಕ ಚಿನ್ನ ಲೇಪನ ಕಾರ್ಯದಲ್ಲಿ ಗಂಭೀರ ಲೋಪವಾಗಿದೆ ಎಂದು ಟ್ರಾವಂಕೂರ್ ದೇವಸ್ವಂ ಬೋರ್ಡ್​ನ (ಟಿಡಿಬಿ)ಒಪ್ಪಿಕೊಂಡಿತು. 2019ರಲ್ಲಿ ಉನ್ನೀಕೃಷ್ಣನ್ ಪೋಟಿಗೆ ಚಿನ್ನದ ಲೇಪನಕ್ಕೆ ನೀಡಿದ ಬಳಿಕ ತೂಕದಲ್ಲಿ ವ್ಯತ್ಯಾಸವಾಗಿರುವುದನ್ನು ಕೇರಳ ಹೈಕೋರ್ಟ್ ವಿಚಾರಣೆ ವೇಳೆ ಪತ್ತೆ ಮಾಡಿತು.

ಪ್ರಕರಣ ಸಾಗಿ ಬಂದ ದಾರಿ


1.ದ್ವಾರಪಾಲಕ ಮೂರ್ತಿಗಳಿಗೆ ಚಿನ್ನದ ಲೇಪನ ಮಾಡಲು ದೇಗುಲವು 2019ರಲ್ಲಿ ನಿರ್ಧರಿಸಿತು. ಇದಕ್ಕೆ ಪ್ರಾಯೋಜಕತ್ವ ನೀಡಲು ಬೆಂಗಳೂರು ಮೂಲದ ಉದ್ಯಮಿ ಉನ್ನೀಕೃಷ್ಣನ್ ಪೋಟಿ ಮುಂದಾದರು. ಉನ್ನೀಕೃಷ್ಣನ್ ಈ ಮುಂಚೆ ಇದೇ ದೇಗುಲದ ಅರ್ಚಕರಿಗೆ ಸಹಾಯಕನಾಗಿ ಕೆಲಸ ಮಾಡಿದ್ದ. ಆದರೆ, ಲೇಪನಗಳನ್ನು ಪ್ರಾಯೋಜಕರಿಗೆ ಹಸ್ತಾಂತರಿಸುವಾಗ ದಾಖಲೆಯಲ್ಲಿ 'ತಾಮ್ರ' ಎಂದು ನಮೂದಿಸಲಾಯಿತು.
2.ಮುಖ್ಯವಾಗಿ, ಯಾವುದೇ ಪ್ರಮುಖ ಕೆಲಸಗಳನ್ನು ಕೈಗೊಳ್ಳಬೇಕಾದರೆ ದೇವಸ್ವಂ ಅಂದರೆ ದೇಗುಲದ ಆಡಳಿತ ಮಂಡಳಿ ಕೇರಳಹೈಕೋರ್ಟ್​ನ ಅನುಮತಿ ಪಡೆಯಬೇಕಾದದ್ದು ಕಡ್ಡಾಯ. ಆದರೆ, ದ್ವಾರಪಾಲಕ ಮೂರ್ತಿಗಳಿಗೆ ಚಿನ್ನ ಲೇಪಿಸುವ ಕಾರ್ಯದಲ್ಲಿ ಈ ನಿಯಮವನ್ನೂ ಉಲ್ಲಂಘಿಸಲಾಯಿತು.
3.ಚಿನ್ನ ಲೇಪನದ ಕಾರ್ಯವನ್ನು ತಮಿಳುನಾಡಿನ ಚೆನ್ನೈ ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಎನ್ನುವ ಸಂಸ್ಥೆಗೆ ವಹಿಸಲಾಗಿತ್ತು. ಚಿನ್ನ ಲೇಪನದ ಕೆಲಸ ಮುಗಿದ ನಂತರ 2020ರಲ್ಲಿ ಪೋಟಿ ಅದನ್ನು ದೇಗುಲಕ್ಕೆ ಹಿಂದಿರುಗಿಸುವಾಗ ಅದರ ತೂಕ 4.5 ಕೆ.ಜಿ.ಗಿಂತ ಕಡಿಮೆ ಇದ್ದರೂ, ಯಾವುದೇ ತನಿಖೆ ಮಾಡಲಿಲ್ಲ.
4.2025ರ ಸೆಪ್ಟೆಂಬರ್ 17ರಂದು ಕೇರಳ ಹೈಕೋರ್ಟ್ ತನಿಖೆಗೆ ಆದೇಶ ನೀಡಿತು. ಕೋರ್ಟ್ ಸೂಚನೆಯಂತೆ ಆರಂಭಿಕ ತನಿಖೆಯನ್ನು ಟ್ರಾವಂಕೂರ್ ದೇವಸ್ವಂ ಬೋರ್ಡ್​ನ (ಟಿಡಿಬಿ) ವಿಚಕ್ಷಣಾ ವಿಭಾಗ ನಡೆಸಿ, ಅವ್ಯವಹಾರದಲ್ಲಿ ದೇಗುಲ ಸಮಿತಿಯ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡಿತು. ಬಳಿಕ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ. ಹಾಗೂ ಕೆ.ವಿ.ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ 2025ರ ಅಕ್ಟೋಬರ್ 6ರಂದು ತನಿಖೆಗೆ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಿ, ಆರು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿತು.
5.ದಾಖಲೆಗಳಲ್ಲಿ ಅವ್ಯವಹಾರ ಮಾಡಲಾಗಿದೆ ಮತ್ತು ಚಿನ್ನದ ಕಳ್ಳತನ ನಡೆದಿದೆ ಎಂಬ ಅಂಶವನ್ನು ಎಸ್​ಐಟಿ 2025ರ ಅಕ್ಟೋಬರ್-ನವೆಂಬರ್​ನಲ್ಲಿ ಪತ್ತೆ ಮಾಡಿತು.

ಬೆಚ್ಚಿಬೀಳಿಸಿದ ಘಟನೆ


ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಬಾಗಿಲಿನ ಎರಡೂ ಬದಿಯಲ್ಲಿ ದ್ವಾರಪಾಲಕ ಮೂರ್ತಿಗಳಿವೆ. ಈ ಎರಡು ದ್ವಾರಪಾಲಕ ಮೂರ್ತಿಗಳ ಮತ್ತು ಬಾಗಿಲಿನ ಚೌಕಟ್ಟಿನ ಚಿನ್ನದ ಲೇಪನಗಳು ಕಾಣೆಯಾದ ಘಟನೆಯನ್ನು ಕೇರಳ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ 2025ರ ಸೆಪ್ಟೆಂಬರ್ 17ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತು. ತಾಮ್ರದಲ್ಲಿ ಮಾಡಿದ ಬಾಗಿಲಿಗೆ ಚಿನ್ನದ ಲೇಪನ ಮಾಡಲು 30 ಕೆಜಿಗಿಂತ ಅಧಿಕ 24 ಕ್ಯಾರೆಟ್ ಚಿನ್ನವನ್ನು ಬಳಸಲಾಗಿತ್ತು. ಅಲ್ಲದೆ, ಬಾಗಿಲಿನ ಚೌಕಟ್ಟಿಗೆ ಎರಡು ಕೆ.ಜಿ. ಚಿನ್ನವನ್ನು ಬಳಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries