ಕಾಸರಗೋಡು: ಸಾಮಾನ್ಯವಾಗಿ ಕುಕೃತ್ಯಗಳಲ್ಲಿ ಶಿಕ್ಷೆಗೊಳಗಾಗಿ ಜೈಲು ಪಾಲಾಗಿರುವ ಕೈದಿಗಳು ಮತ್ತು ಅವರ ಅಲ್ಲಿಯ ಬದುಕಿನ ಬಗ್ಗೆ ಬೇರೆಯದೇ ಗ್ರಹಿಕೆ ಹೊಂದಿರುತ್ತೇವೆ. ತೀವ್ರ ಸಂಕಷ್ಟದಲ್ಲಿ ಕತ್ತಲೆ ಕೋಣೆಯೊಳಗಿನ ಜೀವನ, ಹಳಸಿದ ಆಹಾರ ಮೊದಲಾದವುಗಳು ಇಂತಹ ಭಾವನೆಯಲ್ಲಿ ಕೆಲವು.
ಆದರೆ ಇದಕ್ಕೆಲ್ಲ ಅಪವಾದವೆಂಬಂತೆ ಕಾಸರಗೋಡಿನ ಚೀಮೇನಿಯಲ್ಲಿರುವ ತೆರೆದ ಜೈಲಲ್ಲಿ ಬೇರೆಯದೇ ಆದ ಪ್ರಪಂಚ ಇದೀಗ ಸೃಷ್ಟಿಗೊಂಡಿದ್ದು ಅಚ್ಚರಿಯೊಂದಿಗೆ ಒಮ್ಮೆ ಜೈಲು ನೋಡಿ ಬಂದರೇನು ಎಂದೆನಿಸದಿರದು!
ಇಲ್ಲಿಯ ವಿಶೇಷತೆ ಎಂದರೆ ಕೈದಿಗಳಿಂದ ಆಹಾರ ತಯಾರಿ, ಕೃಷಿ ಮೊದಲಾದ ಚಟುವಟಿಕೆಗಳಿಂದ ಚೀಮೇನಿ ತೆರೆದ ಜೈಲಿಗೆ ಕೋಟ್ಯಂತರ ರೂ. ಆದಾಯ ಬರುತ್ತಿರುವುದೇ ಆಗಿದೆ. ಚಪಾತಿ, ಬಿರಿಯಾನಿಗಳನ್ನು ಈ ಜೈಲಿನಲ್ಲಿ ತಯಾರಿಸುತ್ತಿದ್ದು, ಅದೇ ರೀತಿ ತೆರೆದ ಜೈಲಿನ ದ್ವಾರದ ಸಮೀಪ ಕ್ಯಾಂಟೀನ್ ತೆರೆಯಲಾಗಿದೆ. ಅದಕ್ಕೂ ಉತ್ತಮ ವ್ಯಾಪಾರವಿದೆ. ಕೃಷಿ ಕೂಡ ಇಲ್ಲಿನ ಪ್ರಧಾನ ಆದಾಯ ಮೂಲವಾಗಿದೆ.
2013 ರಲ್ಲಿ ತೆರೆದ ಜೈಲಿನಲ್ಲಿ ಆಹಾರ ಘಟಕ ಆರಂಭಿಸಲಾಗಿತ್ತು. ಆರಂಭದಲ್ಲಿ ಚಪಾತಿ ಹಾಗೂ ಬಿರಿಯಾನಿ ವಿತರಿಸಲಾಗುತ್ತಿತ್ತು. 2017 ರಲ್ಲಿ ಕೆಫೆ ಆರಂಭಿಸಿದ್ದು, ಬಳಿಕ ಆದಾಯ ಹೆಚ್ಚಿತು. ಇದುವರೆಗೆ ಆಹಾರ ಘಟಕದಿಂದ 22 ಕೋಟಿ ರೂ. ಆದಾಯ ಲಭಿಸಿದೆ. ಈ ಬಾರಿ ಸುಮಾರು 3 ಕೋಟಿ ರೂ. ಲಾಭ ಬಂದಿದ್ದು, ಅದರಲ್ಲಿ 2 ಕೋಟಿ ರೂ. ಸರ್ಕಾರಕ್ಕೆ ಪಾವತಿಸಲಾಗಿದೆ.
ಜೈಲಿನ ಕೆಫೆಯಲ್ಲಿದೆ ಬಗೆಬಗೆಯ ಖಾದ್ಯ!
ಜೈಲಿನ ಕೆಫೆಯಲ್ಲಿ ಗ್ರಾಹಕರ ದಟ್ಟಣೆ ಇದ್ದು, ಉತ್ತಮ ವ್ಯಾಪಾರ ನಡೆಯುತ್ತಿದೆ. ಈ ಕೆಫೆಯಲ್ಲಿ ಚಿಕನ್ ಬಿರಿಯಾನಿ, ಚಪಾತಿ, ಚಹಾ, ಎಣ್ಣೆ ತಿಂಡಿಗಳು ಲಭ್ಯವಿವೆ. ಹತ್ತು ರೂ.ಗೆ ಇಲ್ಲಿ ಎಣ್ಣೆ ತಿಂಡಿ ಹಾಗೂ ಚಹಾ ಲಭಿಸುತ್ತದೆ. 70 ರೂ.ಗೆ ಬಿರಿಯಾನಿ, 3 ರೂ.ಗೆ ಚಪಾತಿ ನೀಡಲಾಗುತ್ತದೆ. ಜೈಲಿನಲ್ಲಿರುವ ಫಾರಂನ ಕೋಳಿಗಳನ್ನು ಮಾಂಸಕ್ಕಾಗಿ ಉಪಯೋಗಿಸಲಾಗುತ್ತಿದೆ. ಅವಶ್ಯಕತೆಗಿಂತ ಹೆಚ್ಚಿರುವ ಕೋಳಿಗಳನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ನೀಡಲಾಗುತ್ತದೆ.
ಸಾವಯವ ಕೃಷಿಯಲ್ಲಿ ತೊಡಗಿರುವ ಕೈದಿಗಳು:
ಜೈಲಿನ 30 ಎಕ್ರೆಗಳಷ್ಟು ಪ್ರದೇಶ ಬಳಸಿ ಕೃಷಿ, ಪಶುಸಂಗೋಪನೆ, ಕೋಳಿ ಸಾಕಾಣೆ, ಮೀನು ಸಾಕಾಣೆ ಮೊದಲಾದವುಗಳಿದ್ದು, ಜೈಲು ಪ್ರವಾಸಿ ಕೇಂದ್ರವಾಗುವ ದಿನ ದೂರವಿಲ್ಲ!
ಜೈಲಿನ ಆವರಣದ ವಿಶಾಲವಾದ ಪ್ರದೇಶದಲ್ಲಿ ಕೈದಿಗಳು ಕೃಷಿ ಮಾಡುತ್ತಿದ್ದು, ಇದುವರೆಗೆ ತರಕಾರಿಯಿಂದಲೇ ಸುಮಾರು 1.25 ಕೋಟಿ ರೂ. ಆದಾಯ ಪಡೆಯಲಾಗಿದೆ. ಜೈಲಿನ ಅವಶ್ಯಕತೆಯ ಬಳಿಕ ಉಳಿದ ತರಕಾರಿಗಳನ್ನು ಕೆಫೆಯ ಮೂಲಕ ಮಾರಾಟ ಮಾಡಲಾಗುತ್ತದೆ. ಈ ತರಕಾರಿಗಳನ್ನು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಉಪಯೋಗಿಸದೆ ಬೆಳೆಸಲಾಗುತ್ತದೆ.
ಇತರ ತರಕಾರಿಗಳು ಮಾತ್ರವಲ್ಲದೆ ಬಾಳೆ ಹಾಗೂ ಗೆಣಸು ಕೃಷಿ ಮಾಡಲಾಗುತ್ತಿದೆ. ಹಸು, ಕೋಳಿ, ಆಡುಗಳ ಫಾರ್ಮ್ ಇದ್ದು, ಇವುಗಳ ಗೊಬ್ಬರವನ್ನೇ ಕೃಷಿಗೆ ಉಪಯೋಗಿಸಲಾಗುತ್ತದೆ. ಪ್ರಸ್ತುತ ಇಲ್ಲಿ 200 ಮಂದಿ ಕೈದಿಗಳಿದ್ದಾರೆ.
ಐದು ವರ್ಷಗಳ ಕೃಷಿ ಆದಾಯ
2020-21/ 7,42,679 ರೂ.
2021-22/ 20,88,539 ರೂ.
2022-23/ 15,96,355 ರೂ.
2023-24/ 4,78,971 ರೂ.
2024-25/ 22,11,688 ರೂ.
ಆಹಾರ ತಯಾರಿಯಿಂದ ಲಭಿಸಿದ ಆದಾಯ:
ವರ್ಷ/ಆಹಾರ ಘಟಕ/ಕೆಫೆ
2020-21/ 6,67,168/ 10,67,981
2021-22/ 3,78,500/ 11,07,173
2022-23/ 41,09,715/49,28,994
2023-24/ 1,35,96,930/65,22,677
2024-25/ 1,86,20,065/72,36,873
ಅಭಿಮತ:
-ಜೈಲಿಗೆ ಬರುವವರು ಅಪರಾಧಿಗಳಾದರೂ ಅವರಲ್ಲೂ ಒಂದು ಮಾನವೀಯತೆಯನ್ನು ಬೆಳೆಸುವ, ಸ್ವಾವಲಂಬಿ ಬದುಕು ಕಟ್ಟಿಕೊಡುವ ಜವಾಬ್ದಾರಿಯೂ ಜೈಲು ಶಿಕ್ಷೆಯ ಮೂಲ ಲಕ್ಷ್ಯದ ಒಂದು ಭಾಗ. ಜೈಲಿನ ಎಕ್ರೆಗಟ್ಟಳೆ ಭೂಭಾಗವನ್ನು ವ್ಯರ್ಥಗೊಳಿಸುವ ಬದಲು ಅದನ್ನು ಈ ರೀತಿಯಲ್ಲಿ ಸದುಪಯೋಪಡಿಸುವುದು ಮತ್ತು ತನ್ಮೂಲಕ ಆದಾಯ, ಸ್ವಾವಲಂಬಿ ಪಾಠಗಳನ್ನು ಕಲಿಸುವುದು ಇದರ ಉದ್ದೇಶವಾಗಿದೆ. ಕೈದಿಗಳೇ ಕಾರ್ಮಿಕರಾಗಿ ಇಲ್ಲಿ ದುಡಿಯುತ್ತಾರೆ. ಅದಕ್ಕೆ ತಕ್ಕ ವೇತನವನ್ನೂ ಅವರಿಗೆ ಪಾವತಿಸಲಾಗುತ್ತಿದೆ. ಬಹುಷಃ ಶಿಕ್ಷೆಯ ಬಳಿಕದ ಬದುಕಿಗೆ ಇದೊಂದು ಮಾರ್ಗದರ್ಶಿಯಾಗುವುದರಲ್ಲಿ ಸಂಶಯವಿಲ್ಲ.
-ಕೆ.ಬಿ.ಅನ್ಸಾರ್
ಸೂಫರಿಟೆಂಡೆಂಟ್
ಚಿಮೇನಿ ತೆರೆದ ಜೈಲು. ಕಾಸರಗೋಡು.

.png)
.jpg)
.jpg)
.jpg)
%20K%20B%20Ansar.jpg)
