ಕಾಸರಗೋಡು: ರಾಷ್ಟ್ರಪಿತನನ್ನು ಅವಮಾನಿಸುವ ಕೇಂದ್ರ ಮತ್ತು ದೇವಸ್ವಂ ಆಸ್ತಿಯನ್ನು ಲೂಟಿ ಮಾಡುತ್ತಿರುವ ರಾಷ್ಟ್ರವಿರೋಧಿಗಳಿಗೆ ಆಶ್ರಯ ನೀಡುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
ಡಿಸಿಸಿ ಉಪಾಧ್ಯಕ್ಷ ಬಿ.ಪಿ ಪ್ರದೀಪ್ ಕುಮಾರ್ ಧರಣಿ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ರಾಷ್ಟ್ರಪಿತನ ಹೆಸರನ್ನು ತೆಗೆದುಹಾಕುವುದರ ಜತೆಗೆ ಯೋಜನೆಯನ್ನು ಸಂಪೂರ್ಣ ಬುಡಮೇಲುಗೊಳಿಸಲು ಕೇಂದ್ರ ಮುಂದಾಗಿದೆ. ನೆಹರು ಯುವ ಕೇಂದ್ರದಿಂದ ನೆಹರು ಅವರ ಹೆಸರನ್ನು ತೆಗೆದುಹಾಕಲಾಗಿದೆ. ಇಂದಿರಾ ಆವಾಸ್ ಯೋಜನೆಯಿಂದ ಇಂದಿರಾಗಾಂಧಿ ಹೆಸರು, ರಾಜೀವ್ ಖೇಲ್ ರತ್ನದಿಂದ ರಾಜೀವ್ ಗಾಂಧಿ ಅವರ ಹೆಸರನ್ನು ತೆಗೆದು ಹಾಕುವ ಮೂಲಕ ಮೋದಿ ಸರ್ಕಾರ ದೇಶದ ಇತಿಹಾಸ ತಿರುಚುವ ರಾಷ್ಟ್ರವಿರೋಧಿ ಪ್ರಕ್ರಿಯೆ ಮುಂದುವರಿಸಿರುವುದು ಖಂಡನೀಯ ಎಂದು ತಿಳಿಸಿದರು.
ಶಬರಿಮಲೆಯಲ್ಲಿ ಅಯ್ಯಪ್ಪ ದೇಗುಲದಿಂದ ಚಿನ್ನ ಕಳವುಗೈದ ಪ್ರಕರಣದಲ್ಲಿ ಎಸ್‍ಐಟಿ ತನಿಖೆಯನ್ನು ಹಾದಿತಪ್ಪಿಸುವಲ್ಲಿ ಪಿಣರಾಯಿವಿಜಯನ್ ಸರ್ಕಾರದ ಹಸ್ತಕ್ಷೇಪವನ್ನು ಖಂಡಿಸಲಾಯಿತು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್.ಕಾರ್ತಿಕೇಯನ್ ಅಧ್ಯಕ್ಷತೆ ವಹಿಸಿದ್ದರು. ಹುನೈಸ್ ಸಿ.ಎಂ, ಜಾವೆದ್ ಪುತ್ತೂರು, ಜಿಲ್ಲಾ ಪದಾಧಿಕಾರಿಗಳಾದ ಮಾರ್ಟಿನ್ ಜಾರ್ಜ್, ವಿನೋದ್ ಕಪಿತಾನ್, ಅನೂಪ್ ಕಲ್ಯಾಟ್, ರಫಿ ಅಡೂರು, ಶ್ರೀನಾಥ್ ಬದಿಯಡ್ಕ, ಸುಜಿತ್ ತಚ್ಚಂಗಾಡ್, ಅಕ್ಷಯ ಎಸ್.ಬಾಲನ್, ಮಾರ್ಟಿನ್ ಅಬ್ರಹಾಂ, ರಜಿತಾ ರಾಜನ್, ಕ್ಷೇತ್ರಾಧ್ಯಕ್ಷರಾದ ಆಬಿದ್ ಎಡಚ್ಚೇರಿ, ವಸಂತನ್ ಐ.ಎಸ್., ಶಿಬಿನ್ ಉಪ್ಪಿಳಿಕಾಯಿ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನಕಾರರು ಪೊಲೀಸರ ತಡೆ ಭೇದಿಸಿ ಮುಂದುವರಿಯಲೆತ್ನಿಸಿದಾಗ ಜಲಫಿರಂಗಿ ಪ್ರಯೋಗದ ಮೂಲಕ ಪ್ರತಿಭಟನಾಕಾರರನ್ನು ಚದುರಿಸಲಾಯಿತು.

