ಕಾಸರಗೋಡು: ಎಣ್ಮಕಜೆಯ ಸಿಪಿಎಂ ಮುಖಂಡ, ಪ್ರಸಕ್ತ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕ ಎಸ್. ಸುಧಾಕರನ ವಿರುದ್ಧ ಕಸರಗೋಡು ಮಹಿಳಾ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಲೈಂಗಿಕ ಕಿರುಕುಳದ ಬಗ್ಗೆ 48ರ ಹರೆಯದ ಗೃಹಿಣಿಯೊಬ್ಬರು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿರುವ ದೂರಿಗೆ ಸಂಬಂಧಿಸಿ ಈ ಕೇಸು ದಾಖಲಾಗಿದೆ. ಗೃಹಿಣಿ ರಾಜ್ಯ ಪೊಲೀಸ್ ನಿರ್ದೇಶಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿಗೆ ದೂರು ಸಲ್ಲಿಸಿದ ಒಂದು ವಾರದ ನಂತರ ಈ ಕೇಸು ದಾಖಲಾಗಿದೆ. ಸುಧಾಕರನ ವಿರುದ್ಧ ಕೇಸು ದಾಖಲಿಸುವಂತೆ ಹಾಗೂ ಶಾಲೆಯಿಂದ ಈತನನ್ನು ಅಮನತುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರತಿಭಟನೆಯನ್ನೂ ನಡೆಸಿತ್ತು.
ಸಿಪಿಎಂ ಕುಂಬಳೆ ಏರಿಯಾ ಸಮಿತಿ ಕಾರ್ಯದರ್ಶಿಯಾಗಿದ್ದ ಈತ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದನು. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸುಧಾಕರ್‍ನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಲೈಂಗಿಕ ಕಿರುಕುಳದ ಬಗ್ಗೆ ಪಕ್ಷದ ವತಿಯಿಂದ ಮೂರು ಮಂದಿಯ ಸಮಿತಿಯನ್ನು ರಚಿಸಿ ಆಂತರಿಕ ತನಿಖೆ ನಡೆಸುತ್ತಿರುವ ಮಧ್ಯೆ ಕೇಸು ದಾಖಲಾಗಿದೆ. ಈ ಹಿಂದೆ ಪೆರ್ಲದ ಜಬ್ಬಾರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟು ಸುಧಾಕರ್‍ನನ್ನು ಬಂಧಿಸಲಾಗಿದ್ದು, ಶಿಕ್ಷೆ ಅನುಭವಿಸುತ್ತಿರುವ ಮಧ್ಯೆ ನ್ಯಾಯಾಲಯ ಈತನ ಶಿಕ್ಷೆ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಜೈಲಿಂದ ಹೊರಬಂದಿದ್ದನು.
ಸುಧಾಕರ ಕಳೆದ 30ವರ್ಷಗಳಿಂದ ತನ್ನನ್ನು ಹಿಂಬಾಲಿಸುತ್ತಿದ್ದು, ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾನೆ. ವಿವಾಹ ಭರವಸೆ ನಿಡಿ ವಂಚಿಸಿರುವ ಈತ, ಮದುವೆಯಾದ ನಂತರವೂ ಕಿರುಕುಳ ಮುಂದುವರಿಸಿದ್ದಾನೆ. ಪತಿಯನ್ನು ತೊರೆದು ತನ್ನೊಂದಿಗೆ ಬರುವಂತೆ ಬೆದರಿಕೆಯೊಡ್ಡಿದ್ದಾನೆ. ಅಶ್ಲೀಲ ಚಿತ್ರಗಳನ್ನು ಮೊಬೈಲ್‍ಗೆ ವಾಟ್ಸಪ್ ಮೂಲಕ ಕಳುಹಿಸಿಕೊಡುವುದಲ್ಲದೆ, ಗೂಂಡಾಗಳ ಮೂಲಕವೂ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈತ ಕಳುಹಿಸಿರುವ ಅಶ್ಲೀಲ ಚಿತ್ರ ಹಾಗೂ ಇತರ ದಾಖಲೆಗಳನ್ನೊಳಗೊಂಡ ಪೆನ್‍ಡ್ರೈವ್‍ನೊಂದಿಗೆ ದೂರನ್ನು ಡಿಜಿಪಿಗೆ ಹಾಗೂ ಕಾಸರಗೋಡು ಎಸ್‍ಪಿಗೆ ಮಹಿಳೆ ಕಳುಹಿಸಿಕೊಟ್ಟಿದ್ದರು.


