ಕುಂಬಳೆ: ಕುಂಬಳೆ ಕಣಿಪುರ ಜಾತ್ರಾ ಮಹೋತ್ಸವ ಸಂದರ್ಭ 14ರ ಹರೆಯದ ಬಾಲಕಿ ನಾಪತ್ತೆ ಪ್ರಕರಣ ಪೊಲೀಸರನ್ನು ನಾಲ್ಕು ತಾಸುಗಳ ಕಾಲ ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿದ ಘಟನೆ ನಡೆದಿದೆ.
ಶನಿವಾರ ರಾತ್ರಿ ಮನೆಯವರೊಂದಿಗೆ ಜಾತ್ರೆಗೆ ಆಗಮಿಸಿದ್ದ ಬಾಲಕಿ ರಾತ್ರಿ 11ರ ವೇಳೆಗೆ ಏಕಾಏಕಿ ನಾಪತ್ತೆಯಾಗಿದ್ದಾಳೆ. ಈ ಸಂದರ್ಭ ಮನೆಯವರು ದೇವಸ್ಥಾನ, ಪೇಟೆಯ ವಿವಿಧೆಡೆ ಹುಡುಕಾಡಿದರೂ ಕಾಣಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲಿಸರು ವ್ಯಾಪಕ ಹುಡುಕಾಟದಲ್ಲಿ ನಿರತರಾಗಿ, ವಾಹನ ತಪಾಸಣೆಯನ್ನೂ ಚುರುಕುಗೊಳಿಸಿದರೂ ಬಾಲಕಿಯನ್ನು ಪತ್ತೆಹಚ್ಚಲಾಗಿಲ್ಲ. ಮನೆಯವರು, ಪೊಲಿಸರು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದ ಮಧ್ಯೆ ಬೆಳಗಿನ ಜಾವ 2ರ ವೇಳೆಗೆ ಏಕಾಏಕಿ ಬಾಲಕಿ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾಳೆ. ಈಕೆಯನ್ನು ವಿಚಾರಿಸಿದಾಗ 18ರ ಹರೆಯದ ಯುವಕ ತನ್ನನ್ನು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿರುವುದಾಗಿ ತಿಳಿಸಿದ್ದಾಳೆ.
ಬಾಲಕಿ ವಾಪಸಾದ ಬಗ್ಗೆ ಹೆತ್ತವರು ಹಾಗೂ ಪೊಲೀಸರು ನಿಟ್ಟುಸಿರು ಬಿಟ್ಟರೂ, ಬಾಲಕಿ ಮನೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅಪಹರಿಸಿದ 18ರ ಹರೆಯದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

