ಬದಿಯಡ್ಕ: ನಮ್ಮ ನಾಡಿನ ಪ್ರಾಚೀನ ಪರಂಪರೆಯಲ್ಲಿ ಮೂಡಿಬಂದ ಕಲಾ ಪ್ರಕಾರಗಳ ಸಂರಕ್ಷಣೆಗೆ ಪ್ರಯತ್ನಗಳೆಲ್ಲವನ್ನೂ ಕೈಗೊಳ್ಳಬೇಕು. ನಮ್ಮ ಯೋಚನೆ-ಯೋಜನೆಗಳು ದೀರ್ಘ ಕಾಲೀನ ದೃಷ್ಟಿಗಳೊಂದಿಗೆ ಕ್ಷಿಪ್ರ ಕಾರ್ಯಾನುಷ್ಠಾನಕ್ಕೆ ಒಳಗೊಳ್ಳುವಂತಿರಬೇಕು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ನಿರ್ದೇಶಕ ಡಾ.ಎ.ಬಾಲಕೃಷ್ಣನ್ ಕರೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಟಕ ಹಾಗೂ ಬೇಕಲದ ಕಣ್ಣನ್ ಪಾಟಾಳಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಫೆ.1 ರಂದು ಬೇಕಲದಲ್ಲಿ ನಡೆಯಲಿರುವ ಸಾಂಸ್ಕøತಿಕ ಜಾನಪದ ವಿನಿಮಯದ ಭಾಗವಾಗಿ ಶನಿವಾರ ಬಳ್ಳಪದವು ನಾರಾಯಣೀಯಂ ಸಂಗೀತ ಶಾಲಾ ಸಭಾಂಗಣದಲ್ಲಿ ನಡೆದ ಪೂರ್ವಭಾವೀ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಕಾಸರಗೋಡು ಸಹಿತ ಕರಾವಳಿಯಾದ್ಯಂತದ ಕಲಾ ಪ್ರಕಾರಗಳು ಪರಸ್ಪರ ಸಂಬಂಧಗಳನ್ನು ಹೊಂದಿ ಒಂದರ ಮೇಲೊಂದು ಪ್ರಭಾವ ಅಚ್ಚಳಿಯದ್ದು ಕಂಡುಬರುತ್ತದೆ. ಇವುಗಳ ತಳ ಮಟ್ಟದ ಅಧ್ಯಯನ ಹಾಗೂ ಹೊಸ ತಲೆಮಾರಿಗೆ ದಾಟಿಸುವ ನಿಟ್ಟಿನಲ್ಲಿ ಸಾಂಸ್ಕøತಿಕ ವಿನಿಮಯಗಳು ಹೆಚ್ಚು ಪರಿಣಾಮಕಾರಿ ಎಂದವರು ತಿಳಸಿದರು.
ಜಾನಪದ ಪರಿಷತ್ತಿನ ಕಾರ್ಯದರ್ಶಿ ರವಿ ನಾಯ್ಕಾಪು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ರೂಪುರೇಖೆಗಳ ಬಗ್ಗೆ ವಿವರಿಸಿದರು.
ಜಿ.ಪಂ.ಸದಸ್ಯ ರಾಮಪ್ಪ ಮಂಜೇಶ್ವರ, ಸಮಾಜ ಸೇವಕ ರಾಘವ ಚೇರಾಲು, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಯಾದವ್, ಕಸಾಪ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮೊದಲಾದವರು ಉಪಸ್ಥಿತರಿದ್ದರು. ರವಿ ನಾಯ್ಕಾಪು ಸ್ವಾಗತಿಸಿ, ಶ್ರೀಕಾಂತ್ ನೆಟ್ಟಣಿಗೆ ವಂದಿಸಿದರು.

.jpg)
