ಕಾಸರಗೋಡು: ಕೆಂಪುಕಲ್ಲು ಕೈಗಾರಿಕಾ ವಲಯಕ್ಕೆ ಪರ್ಮಿಟ್ ಮಂಜೂರು ಮಾಡುವುದಕ್ಕಾಗಿ ಹಲವು ಕಾಲಗಳಿಂದ ಒತ್ತಡ, ಮುಷ್ಕರ ನಡೆಸಲಾಗುತ್ತಿದ್ದು, ಸಾವಿರಾರು ಕಾರ್ಮಿಕರು ಕೆಲಸ ಮಾಡುವ ಈ ವಲಯವನ್ನು ಅಧಿಕಾರಿಗಳು ಅವಗಣಿಸುತ್ತಿರುವುದಾಗಿ ದೂರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು. 98 ಶೇಕಡ ಕೆಂಪುಕಲ್ಲು ಕ್ವಾರೆಗಳು ಪಟ್ಟಾ ಭೂಮಿಯಲ್ಲಿ ಕಾರ್ಯಾಚರಿಸುತ್ತಿದ್ದು, 400ರಷ್ಟು ಕೆಂಪುಕಲ್ಲು ಕ್ವಾರೆಗಳಲ್ಲಿ ಕೇವಲ 8 ಕ್ವಾರೆಗಳಿಗೆ ಮಾತ್ರವೇ ಪರವಾನಗಿ ಮಂಜೂರು ಮಾಡಿರುವುದಾಗಿ ದೂರಲಾಗಿದೆ. ಕೆಂಪುಕಲ್ಲು ವಲಯಕ್ಕೆ ಇಸಿ ಹೊರತುಪಡಿಸಬೇಕು, ಒಂದೇ ಬಾರಿ ಅದಾಲತ್ ಜ್ಯಾರಿಗೊಳಿಸಬೇಕು, ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬೇಕು, ವಶಪಡಿಸಿದ ಗಾಡಿಗಳನ್ನು ಕೂಡಲೇ ದಂಡ ಹೇರಿ ಬಿಟ್ಟುಕೊಡಬೇಕು ಮೊದಲಾದ ಬೇಡಿಕೆ ಗಳನ್ನು ಮುಂದಿಟ್ಟು ಕೆಸಿಯುಯುಕೆಎಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಧರಣಿ ನಡೆಸಲಾಯಿತು.
ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಹುಸೈನ್ ಬೇರ್ಕೆ ಸ್ವಾಗತಿಸಿದರು. ರಾಜ್ಯಾಧ್ಯಕ್ಷ ನಾರಾಯಣನ್ ಕೊಳತ್ತೂರು, ಜಿಲ್ಲಾ ಕೋಶಾಧಿಕಾರಿ ವಿನೋದ್ ಕುಮಾರ್, ರಾಜ್ಯ ಉಪಾಧ್ಯಕ್ಷ ಸುಕುಮಾರನ್ ನಾಯರ್, ರಾಜ್ಯ ಸಮಿತಿ ಕಾರ್ಯದರ್ಶಿ ವಿಶ್ವಂಭರನ್, ಅನಿಲ್ ಕುಮಾರ್, ಗೋಪಾಲಕೃಷ್ಣನ್, ಉಮ್ಮರ್, ನಿಸಾಮುದ್ದೀನ್, ಹರೀಶ್ ಶೆಟ್ಟಿ ಮೊದಲಾದವರು ಮಾತನಾಡಿದರು.

