ಸ್ಫೋಟದಲ್ಲಿ ಮೃತಪಟ್ಟ ವೈದ್ಯ ಮತ್ತು ಸ್ಫೋಟ ಪ್ರಕರಣದಲ್ಲಿ ಬಂಧಿತ ವೈದ್ಯರು ಅತ್ಯಾಧುನಿಕ ಘೋಸ್ಟ್ ಸಿಮ್ ಕಾರ್ಡ್‌ಗಳ ಜಾಲ ಮತ್ತು ಎನ್‌ಕ್ರಿಪ್ಟೆಡ್ ಆಯಪ್‌ಗಳನ್ನು ಬಳಸಿ ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳ ಜೊತೆ ಸಂವಹನ ನಡೆಸುತ್ತಿದ್ದರು ಎಂದು ವರದಿಯಾಗಿದೆ.
ಭದ್ರತಾ ಸಂಸ್ಥೆಗಳ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವ 'ಡ್ಯುಯಲ್-ಫೋನ್' ಕಾರ್ಯತಂತ್ರದ ಭಾಗವಾಗಿ ಬಂಧಿತ ವೈದ್ಯರಾದ ಮುಜಮ್ಮಿಲ್ ಗನೈ, ಅದೀಲ್ ರಾಥರ್ ಮತ್ತು ಇತರರು ಘೋಸ್ಟ್ ಸಿಮ್ ಕಾರ್ಡ್‌ಗಳ ಜಾಲವನ್ನು ಬಳಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟ ಡಾ. ಉಮರ್ ಉನ್ ನಬಿ ಸೇರಿದಂತೆ ಪ್ರಕರಣದಲ್ಲಿ ಬಂಧಿತ ಎಲ್ಲ ವೈದ್ಯರು ಎರಡ್ಮೂರು ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳು ಒಂದು ಸಾಮಾನ್ಯ ಫೋನ್ ಮತ್ತು ತಮ್ಮ ಹೆಸರಿನಲ್ಲೇ ಇದ್ದ ಸಿಮ್ ಅನ್ನು ನಿತ್ಯದ ವೈಯಕ್ತಿಕ ಮತ್ತು ವೃತ್ತಿಪರ ಸಂವಹನಕ್ಕಾಗಿ ಬಳಸುತ್ತಿದ್ದರು. ಈ ಮೂಲಕ ಅನುಮಾನ ಬರದಂತೆ ನೋಡಿಕೊಂಡಿದ್ದರು. ಒಂದು ಫೋನ್‌ನಲ್ಲಿ ಕೇವಲ ವಾಟ್ಸ್‌ಆಯಪ್ ಬಳಸುತ್ತಿದ್ದರು. ಅದರಲ್ಲೇ ಪಾಕಿಸ್ತಾನದ ಹ್ಯಾಂಡ್ಲರ್‌ಗಳ(ಉಕಾಸಾ, ಫೈಸಲ್, ಹಾಶ್ಮಿ) ಜೊತೆ ಸಂವಹನ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಕೆಂಡರಿ ಫೋನ್‌ಗೆ ಬಳಸುತ್ತಿದ್ದ ಸಿಮ್‌ಗಳನ್ನು ನಾಗರಿಕರ ಆಧಾರ್ ಕಾರ್ಡ್ ದುರ್ಬಳಕೆ ಮಾಡಿ ಪಡೆಯಲಾಗಿತ್ತು. ಇತ್ತ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ನಕಲಿ ಆಧಾರ್ ಬಳಸಿ ಸಿಮ್ ನೀಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದಾರೆ.
ಈ ಘೋಸ್ಟ್ ಸಿಮ್‌ಗಳು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಡಿಯಲ್ಲಿ ಈಗಲೂ ಸಕ್ರಿಯವಾಗಿದ್ದು, ಅಧಿಕಾರಿಗಳ ನಿದ್ದೆಗೆಡಿಸಿದೆ.
ಸಿಮ್ ಇಲ್ಲದೆ ಮೆಸೇಜಿಂಗ್ ಆಯಪ್ ಬಳಕೆಗೆ ಫೋನ್‌ಗಳಲ್ಲಿರುವ ಫೀಚರ್‌ಗಳನ್ನು ಬಳಸಿಕೊಂಡು ಯೂಟ್ಯೂಬ್ ಮೂಲಕ ಐಇಡಿ ಅಸೆಂಬ್ಲಿ, ಮುಂತಾದ ಮಾಹಿತಿಗಳನ್ನು ರವಾನಿಸುತ್ತಿದ್ದಾರೆ ಎಂದೂ ವರದಿ ತಿಳಿಸಿದೆ.

