ಕಾಸರಗೋಡು: 'ಟಿಎಟಿ'ಪರೀಕ್ಷೆ ವಿಷಯದ ಬಗ್ಗೆ ಪ್ರತಿದಿನ ವಿವಿಧ ಆದೇಶ ಹೊರಡಿಸುವ ಮೂಲಕ ಶಿಕ್ಷಣ ಇಲಾಖೆ ಮತ್ತು ಕೇರಳ ಸರ್ಕಾರ ಶಿಕ್ಷಕ ವಲಯವನ್ನು ಗೊಂಡಲಕ್ಕಿಡುಮಾಡುತ್ತಿರುವುದಾಗಿ ಎನ್‍ಟಿಯು ಜಿಲ್ಲಾ ಸಮ್ಮೇಳನ ಆರೋಪಿಸಿದೆ.
2009ರ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಭಾರತದಲ್ಲಿ 2019 ರಲ್ಲಿ ಕೇಂದ್ರದ ಅಂದಿನ ಯುಪಿಎ ಸರ್ಕಾರ ಟಿಇಟಿ ಕಾನೂನನ್ನು ಅಂದಿನ ಯುಪಿಎ ಸರ್ಕಾರ ಪರಿಚಯಿಸಿದೆ. ಆಗಸ್ಟ್ 23, 2019 ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ, 1 ರಿಂದ 8 ನೇ ತರಗತಿಗಳಲ್ಲಿ ಬೋಧಿಸುವ ಶಿಕ್ಷಕರು ಟಿಇಟಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬ ನಿಯಮ ಜಾರಿಗೆ ಬಂದಾಗ, ಕೇರಳ ಸರ್ಕಾರ ಕೆಟಿಇಟಿ ಹೆಸರಿನಲ್ಲಿ ಅದನ್ನು ಜಾರಿಗೆ ತರಲು 2012 ಕಾನೂನಿನಲ್ಲಿ ಸಡಿಲಿಕೆ ನೀಡಿ, 2013-14 ವರ್ಷಗಳಲ್ಲಿ ಕೆಲಸಕ್ಕೆ ಸೇರಿದವರಿಗೆ ಇದನ್ನು ಕಡ್ಡಾಯಗೊಳಿಸಿದೆ.
ಶಿಕ್ಷಕರು ಸೇವೆಗೆ ಸೇರ್ಪಡೆಗೊಂಡ ನಂತರ ಕೆಟಿಇಟಿ ಉತ್ತೀರ್ಣರಾದರೆ ಸಾಕು ಎಂಬ ನಿಬಂಧನೆಯೊಂದಿಗೆ ಶಿಕ್ಷಕರನ್ನು ನೇಮಿಸಿಕೊಂಡು, ನಂತರ ಈ ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಿದೆ. ಸುಪ್ರೀಂ ಕೋರ್ಟ್ 2025 ಸೆಪ್ಟೆಂಬರ್ 1ರಂದು ಈ ಬಗ್ಗೆ ಕಡ್ಡಾಯಗೊಳಿಸಿ ತೀರ್ಪು ನೀಡಿದಾಗ ಸರ್ಕಾರ ಈ ಹಿಂದೆ ನೀಡಲಾಗಿದ್ದ ಎಲ್ಲಾ ರಿಯಾಯಿತಿಗಳನ್ನು ಮರೆಮಾಚಿ, ಶಿಕ್ಷಕ ಸಮುದಾಯವನ್ನು ವಂಚಿಸಿದೆ. ಸುಪ್ರೀಂ ಕೋರ್ಟ್‍ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಭರವಸೆಯನ್ನು ಕೇರಳ ಸರ್ಕಾರ ಈಡೇರಿಸಿಲ್ಲ. ಸರ್ಕಾರ ಈ ಬಗ್ಗೆ ಸ್ಪಷ್ಟ ಧೋರಣೆಯಿಲ್ಲದೆ ಶಿಕ್ಷಕರನ್ನು ಅತಂತ್ರಸ್ಥಿತಿಗೆ ತಳ್ಳಿರುವುದಾಗಿ ಎನ್‍ಟಿಯು ಜಿಲ್ಲಾ ಸಮ್ಮೇಳನ ಅಭಿಪ್ರಾಯಪಟ್ಟಿದೆ.
ಕೇರಳ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು, ತರಗತಿಗಳಲ್ಲಿ ಹಿಂದಿ ಭಾಷಾ ಅಧ್ಯಯನವನ್ನು ಪ್ರಾರಂಭಿಸಬೇಕು ಎಂದು ಎನ್‍ಟಿಎ ಜಿಲ್ಲಾ ಸಮ್ಮೇಳನವು ನಿರ್ಣಯದ ಮೂಲಕ ಒತ್ತಾಯಿಸಿತು.
ಸಮ್ಮೇಳನವನ್ನು ರಾಜ್ಯ ಸಮಿತಿ ಕಾರ್ಯದರ್ಶಿ ಹರಿ ಆರ್.ವಿಶ್ವನಾಥ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಕೆ.ಪ್ರಭಾಕರನ್ ನಾಯರ್, ಮಧೂರು ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾ ಗೋಪಾಲನ್, ಪಿ.ಉಪೇಂದ್ರನ್, ಎ.ಸುಚಿತಾ, ಎನ್.ಕುಞಂಬು, ಎಂ.ರಂಜಿತ್, ಪಿ.ಚಂದ್ರಿಕಾ, ಪಿ.ಅರವಿಂದಾಕ್ಷ ಭಂಡಾರಿ, ಐ.ಮಹಾಬಲ ಭಟ್ ಉಪಸ್ಥೀತರಿದ್ದರು. ನೂತನ ಜಿಲ್ಲಾಧ್ಯಕ್ಷರಾಗಿ ಟಿ. ಕೃಷ್ಣನ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆ. ಅಜಿತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

