ಬಿಹಾರ(ಶೇ.87),ನಾಗಾಲ್ಯಾಂಡ್(ಶೇ.86)ನಂತಹ ರಾಜ್ಯಗಳು ಹಾಗೂ ದಾದ್ರಾ ಮತ್ತು ನಗರ ಹವೇಲಿ (ಶೇ.100),ದಿಯು ಮತ್ತು ದಮನ್ (ಶೇ.100) ಹಾಗೂ ಜಮ್ಮುಕಾಶ್ಮೀರ (ಶೇ.96.7)ದಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳಿದ್ದು, ತಮಿಳುನಾಡು ಜೈಲುಗಳಲ್ಲಿ ಇಂತಹವರ ಸಂಖ್ಯೆ ಶೇ.68.69ರಷ್ಟಿದೆ ಎಂದು ವರದಿಯು ತಿಳಿಸಿದೆ.
ಜೈಲು ಸುಧಾರಣೆಗಳ ಕುರಿತ ನ್ಯಾ.ಅಮಿತಾವ್ ರಾಯ್ ಸಮಿತಿಯು ತನ್ನ 2022ರ ವರದಿಯಲ್ಲಿ ಹೆಚ್ಚಿನ ಜೈಲುಗಳು ವಿಚಾರಣಾಧೀನ ಕೈದಿಗಳಿಂದ ತುಂಬಿವೆ ಮತ್ತು ಶಿಕ್ಷೆಗೊಳಗಾದವರಿಗೆ ಹೋಲಿಸಿದರೆ ಅವರ ಸಂಖ್ಯೆಯು ಅತ್ಯಂತ ಹೆಚ್ಚಾಗಿದೆ ಎಂದು ಎತ್ತಿ ತೋರಿಸಿತ್ತು.
ಸಮಿತಿಯು ತನ್ನ ವರದಿಯಲ್ಲಿ ಜುಜುಬಿ ಅಪರಾಧಗಳು ಮತ್ತು ಐದು ವರ್ಷ ಅಥವಾ ಹೆಚ್ಚಿನ ಅವಧಿಯಿಂದ ಬಾಕಿಯುಳಿದಿರುವ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಒತ್ತು ನೀಡಿತ್ತು. ಉಚ್ಚ ನ್ಯಾಯಾಲಯಗಳು ಬಾಕಿಯುಳಿದಿರುವ ಪ್ರಕರಣಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ನಡೆಸುವಂತೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳ ನ್ಯಾಯಾಧೀಶರಿಗೆ ನಿರ್ದೇಶನ ನೀಡಬೇಕು ಎಂದೂ ಅದು ಶಿಫಾರಸು ಮಾಡಿತ್ತು.

