ಮಾಸ್ಕೊ: ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರ ಭಾರತವು, ತೈಲ ಆಮದಿಗೆ ಸಂಬಂಧಿಸಿದಂತೆ ನಿಲುವು ಬದಲಿಸಿಕೊಂಡಿದೆ ಎಂಬುದನ್ನು ನಂಬಲಾಗದು ಎಂದು ರಷ್ಯಾ ಬುಧವಾರ ಹೇಳಿದೆ.
ಮಾಧ್ಯಮದವವರನ್ನುದ್ದೇಶಿಸಿ ಮಾತನಾಡಿರುವ ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝಖರೊವಾ, ದೇಶದ ತೈಲ ವ್ಯವಹಾರವು ಎರಡೂ (ಭಾರತ & ರಷ್ಯಾ) ರಾಷ್ಟ್ರಗಳಿಗೆ ನೆರವಾಗಿದೆ.
ಜೊತೆಗೆ, ಜಾಗತಿಕ ತೈಲ ಮಾರುಕಟ್ಟೆಗೆ ಸ್ಥಿರತೆ ಒದಗಿಸಿದೆ ಎಂದು ಹೇಳಿದ್ದಾರೆ.
'ಭಾರತ, ಅಮೆರಿಕ ನಡುವಣ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಘೋಷಿಸಿದ್ದರು. 'ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದೆ. ಅದಕ್ಕೆ ಪ್ರತಿಯಾಗಿ ಅಮೆರಿಕವು ಪ್ರತಿಸುಂಕವನ್ನು ಪ್ರಸ್ತುತ ಶೇ 25ರಿಂದ ಶೇ 18ಕ್ಕೆ ಇಳಿಸಲಿದೆ' ಎಂದೂ ಹೇಳಿದ್ದರು.
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್ ಅವರು, ಭಾರತದಿಂದ ಆಮದು ಆಗುವ ಸರಕುಗಳಿಗೆ ಶೇಕಡ 50ರಷ್ಟು ಸುಂಕ ವಿಧಿಸಿದ್ದಾರೆ. ಈ ಪೈಕಿ ಶೇ 25ರಷ್ಟು 'ಪ್ರತಿಸುಂಕ'ದ ರೀತಿಯಲ್ಲಿದೆ. ಇನ್ನುಳಿದ ಶೇ 25ರಷ್ಟು ಸುಂಕವನ್ನು, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೇರಲಾಗಿದೆ. 'ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಹಾಗೂ ಅಮೆರಿಕದ ಸರಕುಗಳಿಗೆ ಶೂನ್ಯ ಸುಂಕ ವಿಧಿಸಿದರೆ ಭಾರತದ ಸರಕುಗಳ ಮೇಲಿನ ಸುಂಕವನ್ನು ಪ್ರಸ್ತುತ ಶೇ 50ರಿಂದ ಶೇ 18ಕ್ಕೆ ಇಳಿಸಲಾಗುವುದು' ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದರು.
ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಹೇಳಿಕೆಯನ್ನು ಭಾರತ ಬಿಡುಗಡೆ ಮಾಡಿಲ್ಲ.
ತೈಲ ಆಮದು ಶೇ 12ರಷ್ಟು ಕುಸಿತ
ರಷ್ಯಾದಿಂದ ಪ್ರತಿದಿನ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣ ಜನವರಿಯಲ್ಲಿ ಶೇ 12ಕ್ಕೆ ಕುಸಿದಿದೆ. ನವೆಂಬರ್‌ಗೆ ಹೋಲಿಸಿದರೆ, ಡಿಸೆಂಬರ್‌ನಲ್ಲಿ ಈ ಪ್ರಮಾಣವು ಶೇ 22ರಷ್ಟು ಇಳಿಕೆಯಾಗಿ ನಿತ್ಯ 13.8 ಲಕ್ಷ ಬ್ಯಾರಲ್‌ಗೆ ತಲುಪಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
'ಭಾರತವು ಯಾವುದೇ ದೇಶದಿಂದ ತೈಲ ಖರೀದಿಸಲು ಮುಕ್ತವಾಗಿದೆ. ವಿವಿಧ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಭಾರತದ ನಿರ್ಧಾರ ಹೊಸದೇನಲ್ಲ' ಎಂದು ರಷ್ಯಾ ಬುಧವಾರ ಹೇಳಿದೆ.
'ರಷ್ಯಾವು ಭಾರತಕ್ಕೆ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ರಾಷ್ಟ್ರವಲ್ಲ ಎಂಬುದು ನಮಗೆ ಹಾಗೂ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಭಾರತವು ವಿವಿಧ ರಾಷ್ಟ್ರಗಳ ತೈಲೋತ್ಪನ್ನಗಳನ್ನು ಖರೀದಿಸುತ್ತದೆ ಎಂಬುದರಲ್ಲಿ ಹೊಸದೇನೂ ಇಲ್ಲ' ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪುನರುಚ್ಚರಿಸಿದ್ದಾರೆ.

