ಕುಂಬಳೆ: ಅಮೆತ್ತೋಡು ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಪುನ:ಪ್ರತಿಷ್ಠಾ ಶುದ್ಧಿಕಲಶ, ಪ್ರತಿಷ್ಠಾ ದಿನಾಚರಣೆ ಮತ್ತು ವಾರ್ಷಿಕ ನೇಮೋತ್ಸವ ಫೆ. 5ರಿಂದ 10ರ ವರೆಗೆ ವಿವಿಧ ದಿವಸಗಳಲ್ಲಿ ನಡೆಯಲಿದ್ದು, ನಾಟಿ ವೈದ್ಯ, ಔಷಧ ಮಾಂತ್ರಿಕ ಆನೆಬೈದ್ಯ ಎಂದೇ ಖ್ಯಾತಿ ಪಡೆದಿರುವ ಅಮೆತ್ತೋಡು ಮೂಲಬಾರಿಕೆ ಅಮೀನ್ ಕುಟುಂಬಸ್ಥರ ಪೂರ್ವಜ, ಮಾನ ಬೈದ್ಯ ಅವರ ಹೆಸರಲ್ಲಿ ರಚಿಸಲಾಗಿರುವ ಪುಸ್ತಕದ ಬಿಡುಗಡೆ ಫೆ. 6ರಂದು ಮಧ್ಯಾಹ್ನ 12ಕ್ಕೆ ದೈವಸ್ಥಾನದಲ್ಲಿ ಜರುಗಲಿದೆ.
ನಾಲ್ನೂರು ವರ್ಷಗಳ ಹಿಂದೆ ಮಾಯಿಪ್ಪಾಡಿ ಅರಮನೆಯೊಂದಿಗೆ ನಾಟಿ ವೈದ್ಯ ಪದ್ಧತಿಯೊಂದಿಗೆ ನಂಟು ಹೊಂದುವ ಮೂಲಕ ಭೂದಾನ ಪಡೆದುಕೊಂಡಿದ್ದ ಮಾನ ಬೈದ್ಯ ಅವರ ಬಗ್ಗೆ ಬಾಯ್ದೆರೆ ಮಾಹಿತಿಯನ್ನಾಧರಿಸಿದ ಕೃತಿ ಇದಾಗಿದ್ದು, ನಿವೃತ್ತ ಶಿಕ್ಷಕ ಉಮೇಶ್ ಕೆ. ಪೆರ್ಲ ಪುಸ್ತಕ ರಚಿಸಿದ್ದಾರೆ. ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ ಅವರ ದಿವ್ಯ ಉಪಸ್ಥಿತಿಯಲ್ಲಿ ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡವರ್ಮ ರಾಜ ಯಾನೆ ಸಾಮಂತರಸು(13)ಅಧ್ಯಕ್ಷತೆ ವಹಿಸಿ ಪುಸ್ತಕ ಬಿಡುಗಡೆಗೊಳಿಸುವರು. ವಕೀಲ, ಹಿರಿಯ ಧುರೀಣ ಐ. ಸುಬ್ಬಯ್ಯ ರೈ ಇಚ್ಲಂಪಾಡಿ, ಮಂಜುನಾಥ ರೈ ಮಡ್ವ, ಶ್ರೀಧರ ಪೂಜಾರಿ ಗೆಜ್ಜೆಗಿರಿ, ಡಿ.ಎಸ್ ಮೋಹನ ಕುಮಾರ್, ಶಂಕರ ಟೈಲರ್ ಬೆಜಪ್ಪೆ ಮುಖಯ ಅತಿಥಿಯಾಗಿ ಭಾಗವಹಿಸುವರು.


