ಕುಂಬಳೆ: ಆರಿಕ್ಕಾಡಿಯಲ್ಲಿ ಸ್ಥಾಪಿಸಿದ ಜನವಿರುದ್ಧ ಟೋಲ್ ಬೂತ್ ನಿಲುಗಡೆಗೊಳಿಸಿದ ಕೇಂದ್ರ ಸರ್ಕಾರದ ತೀರ್ಮಾನ ಜನಪರ ಹೋರಾಟದ ಜಯವೆಂದು ಶಾಸಕ ಎಕೆಎಂ ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.
ನಾಡು ಒಗ್ಗಟ್ಟಿನಿಂದ ನಡೆಸಿದ ಜನಪರ ಹೋರಾಟದ ಮುಂದೆ ಮಣಿಯದ ಯಾವುದೇ ಅಧಿಕಾರ ಕೇಂದ್ರಗಳಿಲ್ಲವೆಂದು, ಹೈಕೋರ್ಟ್‍ನಲ್ಲಿ ಉಂಟಾದ ಪರಾಮರ್ಶೆಗಳು ಕೇಂದ್ರ ಸರ್ಕಾರದ ನಿಲುವು ತಿದ್ದಲು ಸಹಾಯಕವಾಯಿತೆಂದು ಶಾಸಕರು ತಿಳಿಸಿದರು. ಜನಪರ ಹೋರಾಟದ ಹೆಸರಲ್ಲಿ ಹಲವಾರು ಮಂದಿ ಕಾರ್ಯಕರ್ತರನ್ನು ಕಸ್ಟಡಿಗೆ ತೆಗೆಯಲಾಗಿದ್ದು, ಕೇಸಿನಲ್ಲಿ ಸಿಲುಕಿಸಿ ಈಗಲೂ ಜೈಲಿನಲ್ಲಿದ್ದಾರೆ. ಇವರಿಗೂ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್‍ರಿಗೂ, ಜಿಲ್ಲೆಯ ಶಾಸಕರು ಸಹಿತದ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
.................................................................................................................................
ಸಂಗ್ರಹಿಸಿದ ಟೋಲ್ ಮೊತ್ತ ಹಿಂತಿರುಗಿಸಲು ಸಿಪಿಎಂ ಆಗ್ರಹ:
ಕುಂಬಳೆ: ಆರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ನಿಲುಗಡೆಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನದ ಹಿನ್ನೆಲೆಯಲ್ಲಿ ಇದುವರೆಗೆ ಇಲ್ಲಿ ಸಂಗ್ರಹಿಸಿದ ಟೋಲ್ ಹಿಂತಿರುಗಿಸಬೇಕೆಂದು ಸಿಪಿಎಂ ಆಗ್ರಹಿಸಿದೆ.
ಸಿಪಿಎಂ ಹಾಗೂ ಜನಪರ ಹೋರಾಟ ಸಮಿತಿ ನಡೆಸಿದ ಆಂದೋಲನ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು ಈಗ ಟೋಲ್ ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಹೋರಾಟ ನಡೆಸಿದ ಸ್ಥಳೀಯರ ಮೇಲೆ ದಾಖಲಿಸಿದ ಕೇಸು, ಆರ್ಥಿಕ ನಷ್ಟಗಳನ್ನು ಪರಿಹರಿಸಬೇಕೆಂದು ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕೆ.ಅರ್. ಜಯಾನಂದ ಒತ್ತಾಯಿಸಿದ್ದಾರೆ.
................................................................................................................................
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯಿಂದ ಅಭಿನಂದನೆ:
ಕುಂಬಳೆ: ಅರಿಕ್ಕಾಡಿ ಟೋಲ್ ನಿಲುಗಡೆಗೊಳಿಸುವಂತೆ ಹೆದ್ದಾರಿ ಇಲಾಖೆಗೆ ಆದೇಶ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಇದಕ್ಕಾಗಿ ನಿರಂತರ ಪ್ರತಿ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಸಮಿತಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ತಿಳಿಸಿದೆ.
ಟೋಲ್ ವಿಚಾರದ ನಾಟಕ ಮಾಡಿ ರಾಜಕೀಯ ಲಾಭ ಪಡೆಯಲು ಶಾಸಕರು ನಡೆಸಿದ ನಟನೆ ತಿಳಿದಿದೆ ಎಂದು ಬಿಜೆಪಿ ಮಂಡಲ ಸಮಿತಿ ತಿಳಿಸಿದೆ. ಬಿಜೆಪಿ ಕೇಂದ್ರ ಸಮಿತಿ ಪ್ರಾಮಾಣಿಕವಾಗಿ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡಿದೆ ಎಂದು ಮಂಜೇಶ್ವರ ಮಂಡಲ ಅಧ್ಯಕ್ಷ ಅದರ್ಶ್ ಬಿ.ಎಂ. ತಿಳಿಸಿದ್ದಾರೆ.

