ಕಾಸರಗೋಡು: ಕೇರಳ ಎನ್‍ಜಿಒ ಅಸೋಸಿಯೇಶನ್ ರಾಜ್ಯ ಸಮಿತಿ ವತಿಯಿಂದ ಕಾಸರಗೋಡಿನಿಂದ ಆಯೋಜಿಸಲಾದ ನವಜೀವನ ಯಾತ್ರೆಯನ್ನು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಗುರುವಾರ ಕಾಸರಗೋಡು ನಗರದಲ್ಲಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಸರ್ಕಾರಿ ನೌಕರರು ಹಾಗೂ ರಾಜ್ಯದ ಜನತೆ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಭಿವೃದ್ಧಿ ಕುಂಠಿತಗೊಂಡಿದ್ದು, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ನೇತೃತ್ವದ ಐಕ್ಯರಂಗದ ಆಡಳಿತ ರಾಜ್ಯದಲ್ಲಿ ಅಧಿಕಾರಕ್ಕೇರಬೇಕಾದ ಅನಿವಾರ್ಯತೆಯಿದೆ. ಕಳೆದ ಐದು ವರ್ಷಗಳ ಎಡರಂಗ ಆಡಳಿತದಲ್ಲಿಸರ್ಕಾರಿ ನೌಕರರು ಅತಿ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಬಜೆಟ್‍ನಲ್ಲಿ ಅಗತ್ಯ ಮೊತ್ತವನ್ನು ಮೀಸಲಿಡದೆ ಮುಂದಿನ ಸರ್ಕಾರದ ಹೆಗಲ ಮೇಲೆ ಹೊಣೆಗಾರಿಕೆ ಹೊರಿಸುವ ತಂತ್ರವನ್ನು ಎಡರಂಗ ಮಾಡಿರುವುದಾಗಿ ತಿಳಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಭಾಷಣ ಮಾಡಿದರು. ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು, ಕೆಪಿಸಿಸಿ ಪದಾಧಿಕಾರಿಗಳಾದ ಹಕೀಂ ಕುನ್ನಿಲ್, ಕೆ ನೀಲಕಂಠನ್, ಬಾಲಕೃಷ್ಣ ಪೆರಿಯ, ವಕೀಲ ಅನಿಲ್ ಬೋಸ್, ಯುಡಿಎಫ್ ಸಂಚಾಲಕ ಎ ಗೋವಿಂದನ್ ನಾಯರ್, ಡಿಸಿಸಿ ಪದಾಧಿಕಾರಿಗಳಾದ ಬಿ ಪ್ರದೀಪ್ ಕುಮಾರ್, ಎಂ.ಸಿ ಪ್ರಭಾಕರನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕೇಯನ್ ಪೆರಿಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಿನಿ ಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ವಿ.ಭಕ್ತವತ್ಸಲನ್, ರಾಜೀವನ್ ನಂಬಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಕಲಾಜಾಥದ ಭಾಗವಾಗಿ ಕಲಾಸಂಸರ್ಕಾರಿ ವೇದಿಕೆಯ ಸದಸ್ಯರಿಂದ ಬೀದಿನಾಟಕ ಪ್ರದರ್ಶಿಸಲಾಯಿತು.

