ಕಾಸರಗೋಡು: ಚಿನ್ನಾಭರಣದ ಹೆಸರಲ್ಲಿ ಗಿಲೀಟಿನ ಆಭರಣ ನೀಡಿ ಹಣ ಪಡೆದು ವಂಚಿಸುತ್ತಿದ್ದ ಮಂಡ್ಯ ಮೂಲದ ನಾಲ್ಕು ಮಂದಿ ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ನಿವಾಸಿಗಳಾದ ಅರ್ಜುನ್ ಸೋಲಂಕಿ, ಗಣೇಶ್ ಸೋಲಂಕಿ, ಹರಿಲಾಲ್, ಜೀವನ್ ಲಾಲ್ ಬಂಧಿತರು. ಜಿಲ್ಲಾ ಪೆÇಲೀಸ್ ವರಿಷ್ಟರ ಸ್ಪೆಷಲ್ ಸ್ಕ್ವಾಡ್ ಕಾರ್ಯಾಚರಣೆಯಲ್ಲಿ ಕಾಸರಗೋಡು ಹಳೇ ಬಸ್ ನಿಲ್ದಾಣ ಪರಿಸರದಿಂದ ಇವರನ್ನು ಬಂಧಿಸಲಾಗಿದೆ. ಇವರ ಜತೆಗಿದ್ದ ಇಬ್ಬರು ಸಹಚರರು ಕಾರ್ಯಚರಣೆ ವೇಳೆ ಪರಾರಿಯಾಗಿದ್ದಾರೆ.
ಚಿನ್ನಾಭರಣ ಮಾರಾಟಕ್ಕಿದೆಯೆಂದು ಅಸಲಿ ಆಭರಣಗಳನ್ನು ತೋರಿಸಿ, ಗ್ರಾಹಕರೊಡನೆ ಮಾರಾಟ ಮಾತುಕತೆ ನಡೆಸಿ, ನಿಗದಿತ ಮೊತ್ತ ವಸೂಲಿ ಮಾಡಿದ ಬಳಿಕ ನಕಲಿ ಆಭರಣ ನೀಡಿ ವಂಚಿಸುವುದು ಇವರ ದಂಧೆಯಾಗಿದೆ.
ಬಂಧಿತ ಆರೋಪಿಗಳಿಂದ ತಾಮ್ರ ಮತ್ತು ಕಾಡ್ಮಿಯ ಬಳಸಿ ನಿರ್ಮಿಸಿದ ಆರೂ ಮುಕ್ಕಾಲು ಕಿಲೋ ತೂಕದ ನಕಲಿ ಆಭರಣ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಅಸಲಿ ಚಿನ್ನವನ್ನೇ ಹೋಲುವ ಆಭರಣಗಳು ಇದಾಗಿದ್ದು, ಜ್ಯುವೆಲ್ಲರಿಗಿಂತ ಅಲ್ಪ ಕಡಿಮೆ ದರದಲ್ಲಿ ಚಿನ್ನಾಭರಣ ನೀಡಲಾಗುವುದೆಂದು ಇವರು ಗ್ರಾಹಕರನ್ನು ಸಂಪರ್ಕಿಸುತಿದ್ದರು.
ವಾರದ ಹಿಂದೆ ಕಾಸರಗೋಡು ತಲುಪಿದ ಈ ತಂಡ ಬೇಕಲ ಆಸುಪಾಸು ಕೆಲವರಿಗೆ ಆಭರಣ ಮಾರಾಟಕ್ಕೆತ್ನಿಸಿದ್ದು, ಈ ಬಗ್ಗೆ ಸಂಶಯಗೊಂಡು ನಾಗರಿಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಈ ಬಗ್ಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಲಭಿಸಿದ ಖಚಿತ ಸುಳಿವಿನ ಮೇರೆಗೆ ತಮ್ಮ ನೇತೃತ್ವದ ವಿಶೇಷ ತಂಡ ಹಾಗೂ ಕಾಸರಗೋಡು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದೆ. ನಕಲಿ ಆಭರಣ ನಿಡಿ ವಂಚಿಸಿರುವ ಬಗ್ಗೆ ಇದುವರೆಗೆ ದೂರು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾನ, ಆಂದ್ರ, ತಮಿಳ್ನಾಡಿನಲ್ಲಿ ಹಲವರಿಗೆ ವಂಚನೆ ನಡೆಸಿದ ನಂತರ ಕಾಸರಗೋಡಿಗೆ ಆಗಮಿಸಿದ್ದಾರೆನ್ನಲಾಗಿದೆ. ತಂಡ ಬೇಕಲ, ಪಳ್ಳಿಕೆರೆಯ ವಿವಿಧೆಡೆ ವಾಸ್ತವ್ಯ ಹೂಡಿದ್ದರು.



