ಪೆರ್ಲ: ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದಲ್ಲಿ ಫಲಾನುಭವಿಗಳ ಸಹಕಾರ ಅಗತ್ಯ ಎಂಬುದಾಗಿ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಮಾಜಿ ಸದಸ್ಯ ಬಟ್ಟುಶೆಟ್ಟಿ ಕಾಟುಕುಕ್ಕೆ ತಿಳಿಸಿದ್ದಾರೆ. ಅವರು ಮಂಜೇಶ್ವರ ಬ್ಲಾಕ್ ಪಂಚಾಯಿತಿಯ 2024-25ನೇ ಸಾಲಿನಲ್ಲಿ ಮಂಜೂರಾದ ಎಣ್ಮಕಜೆ ಪಂಚಾಯಿತಿ ಮೂರನೇ ಬಾಳೆಮೂಲೆ ವಾರ್ಡಿನ ಬಾಳೆಮೂಲೆ ಬಳ್ಳ-ವಾಟೆ ಕಾಂಕ್ರೀಟೀಕರಣಗೊಂಡ ರಸ್ತೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕುಗ್ರಮವೆನಿಸಿರುವ ಬಾಳೆಮೂಲೆಯಿಂದ ಬಳ್ಳ-ವಾಟೆ ಮೂಲಕ ಕಟೀಲ್ತಡ್ಕ ಹಾದಿಯಾಗಿ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಈಪ್ರದೇಶದ ಜನತೆಯ ಹಲವು ವರ್ಷಗಳ ಬೇಡಿಕೆಯೊಂದು ಈಡೇರಿದೆ. ನಾಗರಿಕರ ಸಹಕಾರದಿಂದ ರಸ್ತೆ ಕಾಮಗಾರಿ ಯಶಸ್ವಿಯಾಗಿ ಪೂರ್ತಿಗೊಳ್ಳಲು ಸಹಕಾರಿಯಾಗಿರುವುದಾಗಿ ತಿಳಿಸಿದರು. ಬಿಜೆಪಿ ವಾರ್ಡು ಸಮಿತಿ ಅಧ್ಯಕ್ಷ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಆರನೇ ಎಣ್ಮಕಜೆ ಡಿವಿಶನ್ ಸದಸ್ಯೆ ವಿದ್ಯಾಕುಮಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಮತಾ ರೈ, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. ಜನಾರ್ದನ ಸ್ವಾಗತಿಸಿದರು. ಕೃಷ್ಣ ನಾಯ್ಕ್ ಬಳ್ಳ ವಂದಿಸಿದರು. ಈ ಸಂದರ್ಭ ಬಾಳೆಮೂಲೆ ಬಳ್ಳ-ವಾಟೆ ರಸ್ತೆಯ ಮುಂದುವರಿದ ಶಿಥಿಲಾವಸ್ಥೆಯಲ್ಲಿರುವ ಕಚ್ಛಾರಸ್ತೆಯನ್ನು ಸರ್ವಋತು ಸಂಚಾರದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಸ್ಥಳೀಯ ನಾಗರಿಕರು ನೂತನ ಸದಸ್ಯೆ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.


