ಜೀವನದಲ್ಲಿ (Life) ಎಲ್ಲಾ ವಿಷಯಗಳನ್ನು ಒಂದೇ ರೀತಿ ಇಡಬೇಕು, ಸಾಧಿಸಬೇಕು, ಬ್ಯಾಲೆನ್ಸ್ (Balance) ಮಾಡಬೇಕು ಎಂಬ ಒತ್ತಡದ ಕಾಲಘಟ್ಟದಲ್ಲಿ ನಾವು-ನೀವೆಲ್ಲಾ ಸದ್ಯಕ್ಕೆ ಬದುಕನ್ನು ನಡೆಸುತ್ತಿದ್ದೇವೆ. ಜಾಸ್ತಿ ಸಕ್ಸಸ್ (Success), ಹೆಚ್ಚಿನ ಹಣ, ಉತ್ತಮ ಆರೋಗ್ಯ (Health) ಮತ್ತು ಒಳ್ಳೆ ರಿಲೇಷನ್‌ಶಿಪ್ ಎಲ್ಲರ ನಿರೀಕ್ಷೆಯಾಗಿದೆ.
ಇವೆಲ್ಲವನ್ನು ಸಮತೋಲನದಲ್ಲಿಡಲು ನಾವು ಉತ್ಪಾದಕತೆ ಸಲಹೆಗಳನ್ನು ಅನುಸರಿಸುತ್ತಿದ್ದೇವೆ, ಬೆಳಗಿನ ರೂಟಿನ್ ಸೆಟ್ ಮಾಡಿಕೊಂಡಿದ್ದೇವೆ, ಟೈಮ್ ಮ್ಯಾನೇಜ್ ಮಾಡ್ತಿದ್ದೇವೆ.
ನಮ್ಮೆಲ್ಲರಿಗೂ ದಿನಕ್ಕೆ ಇರೋದೇ 24 ಗಂಟೆ ಅಷ್ಟೇ. ಇಡೀ ದಿನವನ್ನೂ ಸರಿಯಾಗಿ ಪ್ಲ್ಯಾನ್ ಮಾಡಿದ್ರೂ, ಏನಾದ್ರೂ ಒಂದು ವಿಷಯ ಮರೆತು ಬಿಡ್ತಿವಿ, ಇಲ್ಲಾ ನೆಗ್‌ಲೆಕ್ಟ್ ಮಾಡಿ ಬಿಡ್ತೀವಿ. ಹೀಗೆ ಜೀವನದಲ್ಲಿ ಯಶಸ್ಸು, ವೃತ್ತಿ ಹಾಗೂ ವೈಯಕ್ತಿಕ ಸಂಬಂಧಗಳ ನಡುವಿನ ಸಮತೋಲನ ಅನ್ನೋದು ಕಷ್ಟದ ವಿಷಯ. ಇದೇ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ "ಫೋರ್ ಬರ್ನರ್ ಥಿಯರಿ" ಯಾಗಿ ಚರ್ಚೆಯಾಗ್ತಿದೆ.
ಏನಿದು "ಫೋರ್ ಬರ್ನರ್ ಥಿಯರಿ"?
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ "ಫೋರ್ ಬರ್ನರ್ ಥಿಯರಿ" ಎಂಬ ಪರಿಕಲ್ಪನೆ, ಜೀವನದಲ್ಲಿ ಯಶಸ್ಸು, ವೃತ್ತಿ ಹಾಗೂ ವೈಯಕ್ತಿಕ ಸಂಬಂಧಗಳ ನಡುವಿನ ಸಮತೋಲನ ಎಷ್ಟು ಕಷ್ಟ ಎಂಬುದನ್ನು ಚರ್ಚೆಗೆ ತಂದಿದೆ.
ಈ ಪರಿಕಲ್ಪನೆಗೆ ಅಮೆರಿಕದ ಹಾಸ್ಯನಟ ಮತ್ತು ಲೇಖಕ ಡೇವಿಡ್ ಸೆಡಾರಿಸ್ ಅವರನ್ನು ಸಾಮಾನ್ಯವಾಗಿ ಲಿಂಕ್ ಮಾಡಲಾಗುತ್ತದೆ. ಅವರ ವಿವರಣೆ ಪ್ರಕಾರ, ಜೀವನದಲ್ಲಿ ಕುಟುಂಬ, ಕೆಲಸ, ಆರೋಗ್ಯ ಮತ್ತು ಸ್ನೇಹಿತರನ್ನು ನಾಲ್ಕು ಬರ್ನರ್‌ಗಳಿರುವ ಸ್ಟೌವ್‌ಟಾಪ್‌ನಂತೆ ಕಲ್ಪಿಸಿಕೊಳ್ಳಬೇಕು.
ಇವುಗಳಲ್ಲಿ ಪ್ರತಿಯೊಂದು ಬರ್ನರ್ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು, ಎಲ್ಲದ್ದಕ್ಕೂ ನಮ್ಮ ಸಮಯ, ಶಕ್ತಿ ಹಾಗೂ ಗಮನ ಬೇಕೆಬೇಕು. ಒಂದೊಮ್ಮೆ ಯಾವುದಾದ್ರೂ ಒಂದನ್ನು ಕಡೆಗಣಿಸಿದರೂ ಜೀವನ ಚಕ್ರ ಏರುಪೇರಾಗುತ್ತದೆ.
ಕುಟುಂಬ, ಕೆಲಸ, ಆರೋಗ್ಯ ಮತ್ತು ಸಂಬಂಧ
ಹೌದು, ಮನುಷ್ಯನ ಶಕ್ತಿ ಅನಿಯಮಿತವಲ್ಲ. ಸಿದ್ಧಾಂತ ಪ್ರಕಾರ, ಯಶಸ್ಸು ಪಡೆಯಲು ಕನಿಷ್ಠ ಒಂದು ಬರ್ನರ್ ಅನ್ನು ಕಡಿಮೆ ಮಾಡಲೇಬೇಕು. ಅತ್ಯಂತ ದೊಡ್ಡ ಯಶಸ್ಸಿಗಾಗಿ ಎರಡು ಬರ್ನರ್‌ಗಳನ್ನು ತಾತ್ಕಾಲಿಕವಾಗಿ "ಆಫ್" ಮಾಡಬೇಕಾಗಬಹುದು. ಈ ಕಠಿಣ ಸತ್ಯವೇ ಈ ಪರಿಕಲ್ಪನೆಯನ್ನು ವೈರಲ್ ಮಾಡಿದೆ.
ಕುಟುಂಬ ಎಂಬ ಬರ್ನರ್‌ನಲ್ಲಿ ಮದುವೆ, ಮಕ್ಕಳು ಹಾಗೂ ಸಮಯ ಮುಖ್ಯವಾಗಿದ್ದು, ಅದನ್ನು ಬೇರೆ ಯಾರಿಗೂ ಒಪ್ಪಿಸಲು ಸಾಧ್ಯವಿಲ್ಲ. ಕೆಲಸ ಬರ್ನರ್ ಹೆಚ್ಚಿನವರಿಗೆ ಗುರುತು ಮತ್ತು ಸ್ಥಾನಮಾನ ನೀಡುತ್ತದೆ. ಆದರೆ ಇದನ್ನು ಆಫ್ ಮಾಡಲು ಬಿಡದೇ ಉರಿಸುತ್ತಲೇ ಇದ್ದರೆ, ಜೀವನದ ಉಳಿದ ಭಾಗಗಳು ಮೂಲೆಗುಂಪಾಗುತ್ತವೆ.
ಇನ್ನು, ಆರೋಗ್ಯ ಬರ್ನರ್ ಸಾಮಾನ್ಯವಾಗಿ ನಿರ್ಲಕ್ಷ್ಯಗೊಳ್ಳುತ್ತದೆ. ನಿದ್ರೆ ಕೊರತೆ, ವ್ಯಾಯಾಮದ ಅಭಾವ ಮತ್ತು ಒತ್ತಡದಿಂದ ಅದು ನಿಧಾನವಾಗಿ ಕುಸಿಯುತ್ತದೆ. ಕೊನೆಯದಾಗಿ ಸಂಬಂಧ ಬರ್ನರ್ ನಿಧಾನವಾಗಿ ಕಡಿಮೆಯಾಗುತ್ತದೆ ಹೋಗುತ್ತದೆ. ಜೀವನದ ಗಡಿಬಿಡಿಯಲ್ಲಿ ಸಂಬಂಧಗಳು ದೂರವಾಗುವುದನ್ನು ಇದು ಸಂಕೇತಿಸುತ್ತದೆ.
ಎಲ್ಲವನ್ನೂ 100% ಬ್ಯಾಲೆನ್ಸ್ ಮಾಡೋಕೆ ಚಾನ್ಸೇ ಇಲ್ಲ!
ಈ ಸಿದ್ಧಾಂತವು ಜೀವನದಲ್ಲಿ ಪರಿಪೂರ್ಣ ಸಮತೋಲನವೆಂಬುದು ಪ್ರತಿದಿನ ಸಾಧ್ಯವಿಲ್ಲ ಅನ್ನೋ ಮಹತ್ವದ ವಿಚಾರವನ್ನು ತಿಳಿಸುತ್ತದೆ. ಇದರ ಬದಲಿಗೆ ಜೀವನವನ್ನು ಋತುಗಳಂತೆ ನೋಡಬೇಕು.
ಅಂದರೆ ಕೆಲ ಸಮಯಗಳಲ್ಲಿ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು, ಜೊತೆಗೆ ಅಗತ್ಯವಿದ್ದಾಗ ಕುಟುಂಬ ಅಥವಾ ಆರೋಗ್ಯವನ್ನು ಆದ್ಯತೆಯಾಗಿಸಬೇಕು ಎಂದು ಸಿದ್ಧಾಂತ ತಿಳಿಸಿದೆ.
ಒಟ್ಟಾರೆ ಈ ಸಿದ್ಧಾಂತದ ಮೂಲ ಸಂದೇಶ ಬಹಳ ಸಿಂಪಲ್. ಇದು ಜೀವನದ ಎಲ್ಲ ಕ್ಷೇತ್ರಗಳನ್ನು ಒಂದೇ ಸಮಯದಲ್ಲಿ ಸಂಪೂರ್ಣವಾಗಿ ಹಿಡಿದುಕೊಳ್ಳಲು ಯತ್ನಿಸುವುದಕ್ಕಿಂತ, ಪ್ರಸ್ತುತ ಕ್ಷಣದಲ್ಲಿ ಯಾವುದು ಹೆಚ್ಚು ಪ್ರಮುಖ ಎಂಬುದನ್ನು ಅರಿತು ಜಾಣ್ಮೆಯಿಂದ ಆದ್ಯತೆ ನೀಡಬೇಕು ಎಂದು ತಿಳಿಸುತ್ತದೆ.
ನಮ್ಮ ಶಕ್ತಿ ಮತ್ತು ಸಮಯ ಸೀಮಿತವಾಗಿವೆ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದೇ ಉದ್ದೇಶಪೂರ್ವಕ ಹಾಗೂ ನಿಜವಾದ ಸಮತೋಲನದ ಜೀವನದತ್ತ ಸಾಗುವ ಮೊದಲ ಹೆಜ್ಜೆ ಎಂದು ಈ ವೈರಲ್ "ಫೋರ್ ಬರ್ನರ್ ಥಿಯರಿ" ಹೇಳಿಕೊಟ್ಟಿದೆ.

