ವಾಷಿಂಗ್ಟನ್: ಅಮೆರಿಕದ ಖ್ಯಾತ ದಿನಪತ್ರಿಕೆ The Washington Post ಸಂಸ್ಥೆಯಲ್ಲಿ ನಡೆದ ಭಾರೀ ಸಿಬ್ಬಂದಿ ಕಡಿತ ಕ್ರಮದ ಪರಿಣಾಮವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪುತ್ರ ಹಾಗೂ ಹಿರಿಯ ಅಂಕಣಕಾರ ಇಶಾನ್ ತರೂರ್ ಕೆಲಸ ಕಳೆದುಕೊಂಡಿದ್ದಾರೆ.
ಸಂಸ್ಥೆಯ ಸುದ್ದಿ ಮನೆಯ ಸುಮಾರು ಮೂರನೇ ಒಂದು ಭಾಗವನ್ನು ಕಡಿತಗೊಳಿಸಲಾಗಿದ್ದು, 300 ಕ್ಕೂ ಹೆಚ್ಚು ಪತ್ರಕರ್ತರನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.
ಅಮೆಝಾನ್ ಸಂಸ್ಥಾಪಕ ಜೆಫ್ ಬೆಜೋಸ್ ಒಡೆತನದ ಈ ಪತ್ರಿಕೆ ತನ್ನ ಕ್ರೀಡಾ ವಿಭಾಗವನ್ನು ಮುಚ್ಚಿ, ಹಲವು ವಿದೇಶಿ ಬ್ಯೂರೋಗಳನ್ನು ಸ್ಥಗಿತಗೊಳಿಸಿ, ಪುಸ್ತಕಗಳ ಪ್ರಕಟನೆ ನಿಲ್ಲಿಸಿರುವುದು ಅಂತರರಾಷ್ಟ್ರೀಯ ವ್ಯಾಪ್ತಿಯಲ್ಲಿ ಗಮನಾರ್ಹ ಉದ್ಯೋಗ ಕಡಿತವನ್ನು ಸೂಚಿಸಿದೆ.
ಅಂತರರಾಷ್ಟ್ರೀಯ ವ್ಯವಹಾರಗಳ ಹಿರಿಯ ಅಂಕಣಕಾರರಾಗಿದ್ದ ಇಶಾನ್ ತರೂರ್ ತಮ್ಮ ನಿರ್ಗಮನವನ್ನು ಸಾಮಾಜಿಕ ಜಾಲತಾಣ X ಮೂಲಕ ದೃಢಪಡಿಸಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, The Washington Post ನ ಸುಮಾರು 800 ಪತ್ರಕರ್ತರಲ್ಲಿ 300 ಕ್ಕೂ ಹೆಚ್ಚು ಮಂದಿಯನ್ನು ಈ ಕ್ರಮದಲ್ಲಿ ವಜಾಗೊಳಿಸಲಾಗಿದೆ.
X ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಇಶಾನ್ ನ್ಯೂಸ್ ರೂಂನ ಚಿತ್ರವನ್ನು ಪ್ರಕಟಿಸಿದ್ದು, ಅದರಲ್ಲಿ ಪತ್ರಿಕೆಯ ಪ್ರಸಿದ್ಧ ಘೋಷಣೆಯಾದ "Democracy Dies in Darkness" ಕಾಣಿಸುತ್ತಿತ್ತು. ಆ ಪೋಸ್ಟ್‌ಗೆ ಅವರು "ಕೆಟ್ಟ ದಿನ" ಎಂದು ಶೀರ್ಷಿಕೆ ನೀಡಿದ್ದರು. ಬಳಿಕ ಅವರ ತಂದೆ ಶಶಿ ತರೂರ್ ಅದನ್ನು ಮರು ಹಂಚಿಕೊಂಡಿದ್ದಾರೆ.
ನಂತರ ವಜಾಗೊಳಿಸುವಿಕೆ ಕುರಿತು ನೇರವಾಗಿ ಪ್ರತಿಕ್ರಿಯಿಸಿದ ಇಶಾನ್, "ಇಂದು The Washington Post ನಿಂದ, ಹೆಚ್ಚಿನ ಅಂತರರಾಷ್ಟ್ರೀಯ ಸಿಬ್ಬಂದಿ ಮತ್ತು ಇತರ ಅನೇಕ ಸಹೋದ್ಯೋಗಿಗಳೊಂದಿಗೆ ತಮ್ಮನ್ನು ವಜಾಗೊಳಿಸಲಾಗಿದೆ" ಎಂದು ಬರೆದಿದ್ದಾರೆ. ಇದೇ ಸಂದರ್ಭದಲ್ಲಿ ಅವರು, "ನಮ್ಮ ನ್ಯೂಸ್ ರೂಂ ಗಾಗಿ ಮತ್ತು ವಿಶೇಷವಾಗಿ ಪತ್ರಿಕೆಗಾಗಿ ಅಂತರರಾಷ್ಟ್ರೀಯವಾಗಿ ಸೇವೆ ಸಲ್ಲಿಸಿದ ಅಪ್ರತಿಮ ಪತ್ರಕರ್ತರಿಗಾಗಿ ನಾನು ಭಾವುಕನಾಗಿದ್ದೇನೆ" ಎಂದು ಹೇಳಿದ್ದಾರೆ.
ತಮ್ಮ ವೃತ್ತಿಜೀವನವನ್ನು ನೆನಪಿಸಿಕೊಂಡ ಇಶಾನ್, ಜನವರಿ 2017ರಲ್ಲಿ "WorldView" ಅಂಕಣವನ್ನು ಆರಂಭಿಸಿದ್ದು, ಜಾಗತಿಕ ವ್ಯವಹಾರಗಳು ಹಾಗೂ ಜಗತ್ತಿನಲ್ಲಿ ಅಮೆರಿಕದ ಪಾತ್ರವನ್ನು ಓದುಗರಿಗೆ ಅರ್ಥಮಾಡಿಕೊಡುವ ಉದ್ದೇಶವಿತ್ತು ಎಂದು ತಿಳಿಸಿದ್ದಾರೆ. ವರ್ಷಗಳ ಕಾಲ ಅಂಕಣವನ್ನು ಹಿಂಬಾಲಿಸುತ್ತಿದ್ದ "ಅರ್ಧ ಮಿಲಿಯನ್ ನಿಷ್ಠಾವಂತ ಚಂದಾದಾರರಿಗೆ" ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ವರದಿಗಾರ್ತಿ ಲಿಝ್ಝಿ ಜಾನ್ಸನ್ ಅವರನ್ನೂ ಕೆಲಸದಿಂದ ತೆಗೆದುಹಾಕಲಾಗಿದ್ದು, ಅವರು ಸಾಮಾಜಿಕ ಜಾಲತಾಣ X ನಲ್ಲಿ "ಯುದ್ಧ ವಲಯದ ಮಧ್ಯದಲ್ಲಿರುವಾಗ The Washington Post ನನ್ನನ್ನು ವಜಾಗೊಳಿಸಿದೆ. ನನಗೆ ಹೇಳಲು ಮಾತುಗಳಿಲ್ಲ. ನಾನು ಕುಸಿದಿದ್ದೇನೆ" ಎಂದು ಬರೆದಿದ್ದಾರೆ. ಅದೇ ರೀತಿ, ಹೊಸದಿಲ್ಲಿ ಬ್ಯೂರೋ ಮುಖ್ಯಸ್ಥ ಪ್ರಾಂಶು ವರ್ಮಾ "ದಿ ವಾಷಿಂಗ್ಟನ್ ಪೋಸ್ಟ್‌ನಿಂದ ನನ್ನನ್ನು ವಜಾಗೊಳಿಸಲಾಗಿದೆ ಎಂದು ಹಂಚಿಕೊಳ್ಳಲು ನನಗೆ ನೋವಾಗುತ್ತದೆ. ನನ್ನ ಅನೇಕ ಪ್ರತಿಭಾನ್ವಿತ ಸ್ನೇಹಿತರನ್ನು ಬಿಟ್ಟು ಹೋಗಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಕೆಲಸ ಮಾಡುವುದು ಒಂದು ಸೌಭಾಗ್ಯ" ಎಂದು ಹೇಳಿದ್ದಾರೆ.
ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಯನಿರ್ವಾಹಕ ಸಂಪಾದಕ ಮ್ಯಾಟ್ ಮುರ್ರೆ ಈ ನಿರ್ಧಾರವನ್ನು, ಕಷ್ಟಕರವಾದರೂ ಅನಿವಾರ್ಯ. ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಓದುಗರ ಅಭ್ಯಾಸಗಳಿಗೆ ಹೊಂದಿಕೊಳ್ಳಲು ಮರುರೂಪಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. "ನಾವು ಎಲ್ಲರಿಗೂ ಎಲ್ಲವೂ ಆಗಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಅಂತರರಾಷ್ಟ್ರೀಯ, ಮೆಟ್ರೋ, ಸಂಪಾದಕೀಯ ಹಾಗೂ ಕ್ರೀಡಾ ವಿಭಾಗಗಳ ಸೇರಿದಂತೆ ಹಲವು ವಿಭಾಗಳ ಮೇಲೆ ವಜಾಗೊಳಿಸುವಿಕೆಯು ಪರಿಣಾಮ ಬೀರಿದೆ. ಆರ್ಥಿಕ ಸವಾಲುಗಳ ನಡುವೆಯೇ 2026ರ ಚಳಿಗಾಲದ ಒಲಿಂಪಿಕ್ಸ್ ವರದಿಯನ್ನು ಕಡಿಮೆ ಮಾಡಿದ ಕೆಲವೇ ಸಮಯದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. 1877ರಲ್ಲಿ ಪ್ರಾರಂಭವಾದ ಈ ಪತ್ರಿಕೆಯನ್ನು ಜೆಫ್ ಬೆಜೋಸ್, 2013ರಲ್ಲಿ ಗ್ರಹಾಂ ಕುಟುಂಬದಿಂದ 250 ಮಿಲಿಯನ್ ಡಾಲರ್ ಗೆ ಖರೀದಿಸಿದ್ದರು.

