ಬದಿಯಡ್ಕ: ಕುಂಬ್ಡಾಜೆ ಗ್ರಾಮದ ಪಾತೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಕೆಲಸ ಕಾರ್ಯಗಳ ಪುರೋಗತಿಯನ್ನು ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಧಾರ್ಮಿಕ ಮುಂದಾಳು ಸಂಜೀವ ಶೆಟ್ಟಿ ಮೊಟ್ಟೆಕುಂಜರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಪರಿಶೀಲಿಸಿ ಅಗತ್ಯದ ಸಲಹೆ ಸೂಚನೆಗಳನ್ನು ನೀಡಲಾಯಿತು.
ಶ್ರೀ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ನಿರ್ಮಾಣ ಕಾರ್ಯವನ್ನು ಅತಿಶೀಘ್ರದಲ್ಲಿ ನಡೆಸಲು ಬೇಕಾದ ನಿಧಿ ಸಂಗ್ರಹವನ್ನು ಊರ್ಜಿತಗೊಳಿಸುವ ಬಗ್ಗೆಯೂ ಕೂಲಂಕಷವಾಗಿ ಚರ್ಚೆನಡೆಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಹಾಗೂ ಉದ್ಯಮಿ ಯಸ್. ಎನ್. ಮಯ್ಯ ಬದಿಯಡ್ಕ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಶ್ರೀ ಕ್ಷೇತ್ರದ ಮುಖ್ಯ ಅರ್ಚಕ ಶಿವಶಂಕರ ಭಟ್ ಪಾತೇರಿ, ಮಾತೃ ಮಂಡಳಿಯ ಗೌರವಾಧ್ಯಕ್ಷೆಯರಾದ ಪುಷ್ಪಾ ಬಾಲಕೃಷ್ಣ ಮಂಗಳೂರು, ಕಲಾವತಿ ಅಮ್ಮಣ್ಣಾಯ ಪಾವೂರು ಅಧ್ಯಕ್ಷೆ ವಸಂತಿ ಕೇಕೆಮೂಲೆ, ಸಮಿತಿಯ ಕಾರ್ಯಾಧ್ಯಕ್ಷ ಸತ್ಯಮೂರ್ತಿ ಅಮ್ಮಣ್ಣಾಯ ಪಾವೂರು, ಧಾರ್ಮಿಕ ಮುಂದಾಳುಗಳು, ಸಮಿತಿಯ ಉಪಾಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಊರಪರವೂರ ಹಲವಾರು ಭಕ್ತ ಜನರು ಭಾಗವಹಿಸಿದ್ದರು. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ನಾರಾಯಣ ಗೋಸಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಮೇಶ್ ಶರ್ಮ ಕುರುಮುಜ್ಜಿ ಕಾರ್ಯಕ್ರಮವನ್ನು ಸಂಯೋಜಿಸಿದರು.

.jpg)
