ಕೋಲ್ಕತ್ತ: ಪಶ್ಚಿಮ ಬಂಗಾಳದ ಪೂರ್ವ ವರ್ಧಮಾನ್ ಜಿಲ್ಲೆಯ ಕತ್ವಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕ ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಕತ್ವಾ-ಅಜೀಮ್‌ಗಂಜ್ ಪ್ಯಾಸೆಂಜರ್ ರೈಲಿನ ಒಂದು ಬೋಗಿಯಲ್ಲಿ ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 30 ನಿಮಿಷಗಳ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಗಮನಿಸಿ ತಕ್ಷಣ ಮಾಹಿತಿ ನೀಡಿದ್ದಾರೆ. ಬೆಂಕಿ ಹರಡುವುದನ್ನು ತಡೆಯಲು ರೈಲ್ವೆ ಸಿಬ್ಬಂದಿ ತಕ್ಷಣವೇ ಬೋಗಿಯನ್ನು ಬೇರ್ಪಡಿಸಿದರು ಎಂದು ಪೂರ್ವ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಬೆಂಕಿಯ ಕಾರಣವನ್ನು ಪತ್ತೆಮಾಡಲು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

