ಮೆಲ್ಬೋರ್ನ್: ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರೆರ್ೂಗ್ ಅವರ ಆಸ್ಟ್ರೇಲಿಯ ಭೇಟಿಯನ್ನು ವಿರೋಧಿಸಿ ಮೆಲ್ಬೋರ್ನ್ ಹಾಗೂ ಸಿಡ್ನಿ ನಗರಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಮಂಗಳವಾರ ಹಿಂಸೆಗೆ ತಿರುಗಿದೆ. ಎರಡೂ ನಗರಗಳಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸಿಡ್ನಿಯಲ್ಲಿ ನಡೆದ ಹಿಂಸಾಚಾರದಲ್ಲಿ ನ್ಯೂಸೌತ್‌ವೇಲ್ಸ್‌ನ ಗ್ರೀನ್ಸ್ ಪಕ್ಷದ ಸಂಸದ ಅಬಿಗೈಲ್ ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾ ಸ್ಥಳದಿಂದ ನಿರ್ಗಮಿಸುತ್ತಿದ್ದಾಗ ಪೊಲೀಸರು ತನಗೆ ಥಳಿಸಿದ್ದಾರೆಂದು ಅವರು ಆಪಾದಿಸಿದ್ದಾರೆ.
ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 15 ಮಂದಿಯ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆರೊರ್‌ಗ್ ಅವರನ್ನು ಆಸ್ಟ್ರೇಲಿಯ ಸರಕಾರ ಆಹ್ವಾನಿಸಿತ್ತು.
ಸಿಡ್ನಿಯಲ್ಲಿ ಸೋಮವಾರ ಸಂಜೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಡ್ನಿಯ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಮಂದಿಯನ್ನು ತೆರವುಗೊಳಿಸಲು ಪೊಲೀಸರು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು. ಬೊಂಡಿ ಬೀಚ್ ದಾಳಿಯಲ್ಲಿ ಮೃತರ ಕುಟಂಬಸ್ಥರನ್ನು ಇಸ್ರೇಲ್ ಅಧ್ಯಕ್ಷರು ಭೇಟಿಯಾಗಲಿದ್ದಾರೆ.

