ನವದೆಹಲಿ/ತಿರುವನಂತಪುರಂ: ಕಾಂಗ್ರೆಸ್ ಪಕ್ಷದೊಳಗಿನ ʼಆಂತರಿಕ ಭಿನ್ನಮತʼ ಹಾಗೂ ʼಶಿಸ್ತಿನ ಕೊರತೆʼ ಕುರಿತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದ ವಕ್ತಾರ ಪವನ್ ಖೇರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಹುದೆಂದು ಅವರು ಇತ್ತೀಚೆಗೆ ನೀಡಿದ ಹೇಳಿಕೆಯ ಬೆನ್ನಲ್ಲೇ ಈ ವಿವಾದಾತ್ಮಕ ಹೇಳಿಕೆಗಳು ಹೊರಬಿದ್ದಿವೆ.
ಸುದ್ದಿ ಸಂಸ್ಥೆ ANIಗೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕತ್ವದ ಒಳಜಗಳವನ್ನು ಎತ್ತಿ ತೋರಿಸಿದ ಅಯ್ಯರ್, "ಒಬ್ಬರನ್ನೊಬ್ಬರು ಎದುರಿಸುತ್ತಿರುವ ಆಂತರಿಕ ಭಿನ್ನಮತವಿರುವ ಪಕ್ಷಕ್ಕೆ ಯಾರು ಮತ ಹಾಕುತ್ತಾರೆ?" ಎಂದು ಪ್ರಶ್ನಿಸಿದರು. ಪಕ್ಷದೊಳಗಿನ ಶಿಸ್ತಿನ ಕೊರತೆ ಸಾರ್ವಜನಿಕರಿಗೂ ಕಂಡು ಬರುತ್ತಿದೆ ಎಂದರು.
ಪವನ್ ಖೇರಾ ಕುರಿತು ತಮಗೆ ಯಾವುದೇ ಗೌರವವಿಲ್ಲ ಎಂದು ಸ್ಪಷ್ಟಪಡಿಸಿದ ಅಯ್ಯರ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರದಲ್ಲಿನ ಶಿಸ್ತನ್ನು ಹೋಲಿಕೆ ಮಾಡಿದರು. "ಕೇರಳದ ಜನರಿಗೆ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿಲ್ಲವೆಂದು ನೀವು ಭಾವಿಸುತ್ತೀರಾ? ಕನಿಷ್ಠ ಪಿಣರಾಯಿ ಸರ್ಕಾರದಲ್ಲಿ ಶಿಸ್ತು ಇದೆ. ಅವರಿಗೆ ಮಣಿಶಂಕರ್ ಅಯ್ಯರ್‌ಗಳಿಲ್ಲ," ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇತಿಹಾಸದ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಹಾಗೂ ಸುಭಾಷ್ ಚಂದ್ರ ಬೋಸ್ ನಡುವಿನ ಭಿನ್ನಾಭಿಪ್ರಾಯಗಳನ್ನೂ ಪ್ರಸ್ತಾಪಿಸಿ, "ಅವರು ಭಿನ್ನಾಭಿಪ್ರಾಯಗಳನ್ನು ಎದುರಿಸಿದರು. ಆದರೆ ಪ್ರಸ್ತುತ ಕಾಂಗ್ರೆಸ್ ಅದನ್ನು ಹೇಗೆ ಎದುರಿಸುತ್ತದೆ?" ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಲ್ಲಿ ಲಕ್ಷಾಂತರ ಮಂದಿ ಉತ್ತಮ ವಕ್ತಾರರಾಗಬಲ್ಲರು. ಪವನ್ ಖೇರಾ ಅವರನ್ನು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳುವುದನ್ನೇ ಪುನರಾವರ್ತಿಸುವ ಕೈ ಗೊಂಬೆ ಎಂದು ಬಣ್ಣಿಸಿದ ಅಯ್ಯರ್, ಅವರು ವಕ್ತಾರರಲ್ಲ, ಗಿಳಿ, ಎಂದು ವ್ಯಂಗ್ಯವಾಡಿದರು.
ಮತ್ತಷ್ಟು ವಾಗ್ದಾಳಿ ಮಾತನಾಡಿದ ಅಯ್ಯರ್, "ಪವನ್ ಖೇರಾಗೆ ಒಂದು ಸಂದೇಶ ಕಳುಹಿಸಬೇಕು. ದಿಲ್ಲಿಯಲ್ಲಿ ಎಂ.ಎ. ಬೇಬಿ ಜೊತೆ ಮೈತ್ರಿ ಮಾಡಿಕೊಂಡಿರುವ ಅವರು, ನಾನು ಕೇರಳದಲ್ಲಿ ಪಿಣರಾಯಿ ವಿಜಯನ್ ಜೊತೆ ಕೈಜೋಡಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಯಾವ ರೀತಿಯ ಕಾಂಗ್ರೆಸ್ಸಿಗ? ತಾವು ಇನ್ನೂ ಕಾಂಗ್ರೆಸ್ ಸದಸ್ಯರೇ ಎಂದು ಸ್ಪಷ್ಟಪಡಿಸಿದ ಅವರು, ಪವನ್ ಖೇರಾ ನನ್ನನ್ನು ಪಕ್ಷದಿಂದ ಹೊರಹಾಕಲು ಮುಂದಾದರೆ, ನಾನು ಸಂತೋಷದಿಂದ ಹೊರಗೆ ಹೋಗುತ್ತೇನೆ," ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪವನ್ ಖೇರಾ, ಅಯ್ಯರ್ ಅವರ ಹೇಳಿಕೆಗಳು ವೈಯಕ್ತಿಕ ಅಭಿಪ್ರಾಯ ಮಾತ್ರವಾಗಿದ್ದು, ಅವರಿಗೆ ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. 'X' ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಖೇರಾ, "ಅವರು ಸಂಪೂರ್ಣವಾಗಿ ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತನಾಡುತ್ತಿದ್ದಾರೆ," ಎಂದು ಪೋಸ್ಟ್ ಮಾಡಿದ್ದಾರೆ.
ಇದರ ನಡುವೆ, ತಿರುವನಂತಪುರಂನಲ್ಲಿ ನಡೆದ ರಾಜ್ಯ ಯೋಜನಾ ಮಂಡಳಿಯ 'ವಿಷನ್ 2031: ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವ' ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅಯ್ಯರ್, ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮ್ಮುಖದಲ್ಲಿ ಮಾತನಾಡಿದ ಅವರು, "ಕೇರಳವನ್ನು ದೇಶದ ಅತ್ಯುತ್ತಮ ಪಂಚಾಯತ್ ರಾಜ್ ರಾಜ್ಯವನ್ನಾಗಿ ಮರುಸ್ಥಾಪಿಸಲು ರಾಜ್ಯ ಕಾನೂನುಗಳಿಗೆ ತಿದ್ದುಪಡಿ ತರಬೇಕು," ಎಂದು ಮನವಿ ಮಾಡಿದರು.
ಥಾಮಸ್ ಐಸಾಕ್ ಅವರ ಒಳನೋಟಗಳು, ತಮ್ಮ ಅಧ್ಯಕ್ಷತೆಯಲ್ಲಿ ಸಿದ್ಧವಾದ ಐದು ಸಂಪುಟಗಳ ವರದಿ ಹಾಗೂ ಯೋಜನಾ ಆಯೋಗದ ವಿ.ಕೆ. ರಾಮಚಂದ್ರನ್ ಅವರ ಜಿಲ್ಲಾ ಯೋಜನೆ ಕುರಿತ ಟಿಪ್ಪಣಿಗಳನ್ನು ಉಲ್ಲೇಖಿಸಿದ ಅಯ್ಯರ್, "ದೇಶದಲ್ಲಿ ಪಂಚಾಯತ್ ರಾಜ್‌ಗೆ ಬೆಂಬಲ ನೀಡುವವರು ಕಡಿಮೆಯಾಗುತ್ತಿದ್ದಾರೆ ಎಂಬ ಭಯವಿದೆ," ಎಂದು ಕಳವಳ ವ್ಯಕ್ತಪಡಿಸಿದರು.

