HEALTH TIPS

ಅಹ್ಮದಾಬಾದ್ ವಿಮಾನ ದುರಂತ | 'ಇಂಧನ ಸ್ವಿಚ್‌ಗಳನ್ನು ಪೈಲಟ್ ಉದ್ದೇಶಪೂರ್ವಕವಾಗಿ ಆಫ್ ಮಾಡಿರಬಹುದು: ಇಟಾಲಿಯನ್ ಪತ್ರಿಕೆ ವರದಿ

ನವದೆಹಲಿ/ಅಹಮದಾಬಾದ್: ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 2025ರ ಜೂನ್ 12ರಂದು ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೈಲಟ್ ಗಳಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿ ವಿಮಾನದ ಇಂಧನ ಸ್ವಿಚ್ ಗಳನ್ನು ಆಫ್ ಮಾಡಿರುವ ಸಾಧ್ಯತೆ ಇದೆ ಎಂದು ಅಂತಿಮ ತನಿಖಾ ವರದಿಯಲ್ಲಿ ತಜ್ಞರು ಉಲ್ಲೇಖಿಸುವ ಸಾಧ್ಯತೆಯಿದೆ ಎಂದು ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ಪಾಶ್ಚಾತ್ಯ ವಿಮಾನಯಾನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಈ ದುರಂತದಲ್ಲಿ 12 ಸಿಬ್ಬಂದಿ ಸೇರಿ ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ 241 ಮಂದಿ ಮೃತಪಟ್ಟಿದ್ದು, ನಿಯಂತ್ರಣ ಕಳೆದುಕೊಂಡ ವಿಮಾನ ಪತನವಾದ ಪರಿಣಾಮ ಆ ಪ್ರದೇಶದಲ್ಲಿದ್ದ 19 ಜನರೂ ಮೃತಪಟ್ಟಿದ್ದರು. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 260ಕ್ಕೆ ಏರಿತ್ತು.

ಪತ್ರಿಕೆಯ ವರದಿ ಪ್ರಕಾರ, ಭಾರತೀಯ ತನಿಖಾಧಿಕಾರಿಗಳು ಸಿದ್ಧಪಡಿಸುತ್ತಿರುವ ಅಂತಿಮ ವರದಿಯಲ್ಲಿ ತಾಂತ್ರಿಕ ದೋಷ ಪತ್ತೆಯಾಗಿಲ್ಲ ಎಂದು ಹೇಳುವ ಸಾಧ್ಯತೆ ಇದೆ. ಕಾಕ್ಪಿಟ್ ಧ್ವನಿ ರೆಕಾರ್ಡಿಂಗ್ ಗಳನ್ನು ಮರು ವಿಶ್ಲೇಷಣೆ ನಡೆಸಿದ ಬಳಿಕ ಯಾವ ಪೈಲಟ್ ಇಂಧನ ಸ್ವಿಚ್ ಗಳನ್ನು 'ರನ್' ಸ್ಥಿತಿಯಿಂದ 'ಕಟ್‌ಆಫ್' ಗೆ ಸ್ಥಳಾಂತರಿಸಿದ್ದಾರೆ ಎಂಬುದನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಹಾಗೂ ನಾಗರಿಕ ವಿಮಾನಯಾನ ಸಚಿವಾಲಯವು ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.

ಬೋಯಿಂಗ್ 787 ಡ್ರೀಮ್ಲೈನರ್ ಆಗಿದ್ದ AI-171 ವಿಮಾನವು ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್ಗಳು ಆಫ್ ಆಗಿ ಸುಮಾರು ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯದ ಮೇಲೆ ಬಿದ್ದಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸ್ಥಳದಲ್ಲೇ ಮೃತಪಟ್ಟರೆ,

ಅಂತಿಮ ವರದಿಯಲ್ಲಿ ಉದ್ದೇಶಪೂರ್ವಕ ಕೃತ್ಯ ಎಂಬುದನ್ನು ನೇರವಾಗಿ ಉಲ್ಲೇಖಿಸಲಾಗುತ್ತದೆಯೇ ಅಥವಾ ಜವಾಬ್ದಾರಿಯನ್ನು ನಿರ್ದಿಷ್ಟ ವ್ಯಕ್ತಿಯ ವೈಫಲ್ಯ ನಮೂದಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ಹಿಂದೆ ವಿಮಾನದ ಕಮಾಂಡರ್ ಸುಮೀತ್ ಸಭರ್ವಾಲ್ ಹೆಸರು ಹೊರ ಬರಲಿದೆ ಎಂದು ಪತ್ರಿಕೆ ತಿಳಿಸಿದೆ. ಸಭರ್ವಾಲ್ ಈ ದುರಂತದಲ್ಲೇ ಮೃತಪಟ್ಟಿದ್ದಾರೆ.

ಭಾರತೀಯ ಪೈಲಟ್ ಸಂಘಗಳು ಮತ್ತು ಸಭರ್ವಾಲ್ ಕುಟುಂಬ ಈ ಆರೋಪವನ್ನು ತೀವ್ರವಾಗಿ ತಳ್ಳಿಹಾಕಿದ್ದು, ವಿಮಾನ ತಯಾರಕ ಕಂಪೆನಿ, ವಿಮಾನಯಾನ ಸಂಸ್ಥೆ ಹಾಗೂ ಇತರ ತಾಂತ್ರಿಕ ಅಂಶಗಳ ಮೇಲೂ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿವೆ.

ಮಾನವೀಯ ಕಾರಣವನ್ನು ಒಪ್ಪಲು ಭಾರತೀಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲೇ, ಅಮೆರಿಕದ ತಜ್ಞರು ಕ್ಯಾಪ್ಟನ್ ಕಡೆಗೆ ಗಮನ ಹರಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಡಿಸೆಂಬರ್ನಲ್ಲಿ ಭಾರತೀಯ AAIB ತನಿಖಾಧಿಕಾರಿಗಳು ವಾಷಿಂಗ್ಟನ್ ಗೆ ತೆರಳಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಪ್ರಯೋಗಾಲಯಗಳಲ್ಲಿ ವಿಮಾನದ ಬ್ಲಾಕ್ ಬಾಕ್ಸ್ ಮಾಹಿತಿಯನ್ನು ಮರುಪರಿಶೀಲಿಸಿದ್ದರು. ವಿಶೇಷವಾಗಿ ಕಾಕ್ ಪಿಟ್ ಆಡಿಯೋ ದಾಖಲೆಗಳ ಮರು ವಿಶ್ಲೇಷಣೆಗೆ ಒತ್ತು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಡಿಯೋ ವಿಶ್ಲೇಷಣೆಯು ಯಾವ ಪೈಲಟ್ ಮಾರಕ ಕ್ರಮ ಕೈಗೊಂಡರು ಎಂಬುದನ್ನು ಸ್ಪಷ್ಟಪಡಿಸಿದೆಎಂದು ವರದಿ ಹೇಳುತ್ತದೆ.

ಬೋಯಿಂಗ್ 787 ಸಿಮ್ಯುಲೇಟರ್ ಪರೀಕ್ಷೆಗಳನ್ನು ನಡೆಸಿದ ಅಮೆರಿಕದ ತಜ್ಞರು ಮಾನವ ಹಸ್ತಕ್ಷೇಪದಿಂದ ಉದ್ದೇಶಪೂರ್ವಕವಾಗಲಿ ಅಥವಾ ಆಕಸ್ಮಿಕವಾಗಲಿ ಎರಡೂ ಎಂಜಿನ್ಗಳು ಸ್ಥಗಿತಗೊಳ್ಳುವಂತಹ ವೈಫಲ್ಯ ಸನ್ನಿವೇಶವನ್ನು ಕಂಡುಕೊಳ್ಳಲಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

ಫ್ಲೈಟ್ ಡೇಟಾ ರೆಕಾರ್ಡರ್ ಆಧರಿಸಿದ ಪಾಶ್ಚಾತ್ಯ ಮೌಲ್ಯಮಾಪನಗಳು, ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಪೈಲಟಿಂಗ್ ಮಾಡುತ್ತಿದ್ದಾಗ ಮೇಲ್ವಿಚಾರಣೆ ಮಾಡುತ್ತಿದ್ದ ಕ್ಯಾಪ್ಟನ್ ಸಭರ್ವಾಲ್ ಕಡೆಗೆ ಸೂಚಿಸುತ್ತವೆ ಎಂದು ಹೇಳಲಾಗಿದೆ. ಎಂಜಿನ್ಗಳು ಕ್ರಮವಾಗಿ ಸ್ಥಗಿತಗೊಂಡಿದ್ದು, ಮೊದಲು ಕ್ಯಾಪ್ಟನ್ ಭಾಗದಲ್ಲಿರುವ ಎಡ ಎಂಜಿನ್, ನಂತರ ಬಲ ಎಂಜಿನ್. ಅಂತಿಮ ಕ್ಷಣಗಳಲ್ಲಿ ಫಸ್ಟ್ ಆಫೀಸರ್ ನಿಯಂತ್ರಣ ಯೋಕ್ ಬಳಸಿ ಎತ್ತರ ಮರಳಿ ಪಡೆಯಲು ಯತ್ನಿಸಿದ್ದರೆ, ಕ್ಯಾಪ್ಟನ್ನ ಸ್ವಿಚ್ ಗಳು ಸ್ಥಿರವಾಗಿದ್ದವು ಎಂದು ವರದಿ ವಿವರಿಸಿದೆ.

ಅಪಘಾತದ ಒಂದು ತಿಂಗಳ ಬಳಿಕ ಬಿಡುಗಡೆಯಾದ ಪ್ರಾಥಮಿಕ ವರದಿ ಪ್ರಕಾರ, ಇಂಧನ ಸ್ವಿಚ್ಗಳನ್ನು 'ರನ್' ನಿಂದ 'ಕಟ್‌ಆಫ್' ಗೆ ಸ್ಥಳಾಂತರಿಸಿದ ತಕ್ಷಣವೇ ಎರಡೂ ಎಂಜಿನ್ಗಳು ಬಹುತೇಕ ಏಕಕಾಲದಲ್ಲಿ ಸ್ಥಗಿತಗೊಂಡಿದ್ದವು. ಕಾಕ್ಪಿಟ್ ವಾಯ್ಸ್ ರೆಕಾರ್ಡರ್ನಲ್ಲಿ "ನೀವು ಎಂಜಿನ್ಗಳನ್ನು ಏಕೆ ಆಫ್ ಮಾಡಿದ್ದೀರಿ?" ಎಂಬ ಪ್ರಶ್ನೆಗೆ "ಅದು ನಾನು ಅಲ್ಲ" ಎಂಬ ಪ್ರತಿಕ್ರಿಯೆ ದಾಖಲಾಗಿದ್ದರೂ, ಯಾರು ಏನು ಹೇಳಿದ್ದಾರೆ ಎಂಬುದನ್ನು ವರದಿ ಸ್ಪಷ್ಟಪಡಿಸಿರಲಿಲ್ಲ.

ಅಂತಿಮ ತೀರ್ಮಾನಗಳು 'ರಾಜಕೀಯ ಮೌಲ್ಯಮಾಪನ'ಕ್ಕೂ ಒಳಪಡುವ ಸಾಧ್ಯತೆ ಇದೆ ಎಂದು ಮೂಲಗಳು ಪತ್ರಿಕೆಗೆ ತಿಳಿಸಿವೆ. ರಾಷ್ಟ್ರೀಯ ವಿವಾದಗಳನ್ನು ತಪ್ಪಿಸಲು ಅಂತಿಮ ವರದಿ ಹೆಚ್ಚು ಜಾಗರೂಕತೆಯಿಂದ ರೂಪುಗೊಳ್ಳಬಹುದು ಎಂದು ಪತ್ರಿಕೆ ಹೇಳಿದೆ.

ಎನ್ಟಿಎಸ್ಬಿ ವಕ್ತಾರ ಪೀಟರ್ ಸಿ. ಕ್ನಡ್ಸನ್ ಈ ವಿಚಾರದಲ್ಲಿ ಭಾರತೀಯ ಏರ್ಕ್ರಾಫ್ಟ್ ಆಕ್ಸಿಡೆಂಡ್ ಇನ್ವೇಸ್ಟಿಗೇಷನ್ ಬ್ಯೂರೋ AAIBವನ್ನು ಸಂಪರ್ಕಿಸಲು ಸೂಚಿಸಿದ್ದು, AAIB, ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಸೇರಿದಂತೆ ಭಾರತೀಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries