ಕಾಸರಗೋಡು: ಹೋಟೆಲಲ್ಲಿ ಆಹಾರ ನೀಡಲು ವಿಳಂಬ ಮಾಡಿರುವುದಾಗಿ ಆರೋಪಿಸಿ, ನೌಕರನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನಗರದ ಕೆಪಿಆರ್ ರಾವ್ ರಸ್ತೆಯ ಹೋಟೆಲ್ ಒಂದರ ಕಾರ್ಮಿಕ ನಾಯಮರ್‍ಮೂಲೆ ಪಡಿಙËರಮೂಲೆ ನಿವಾಸಿ ಪಿ. ಉಮ್ಮರ್ ಅವರ ದೂರಿನ ಮೇರೆಗೆ ಮಹಮ್ಮದಾಲಿ, ಅಬ್ದುಲ್ ಫಿರೋಸ್ ಹಾಗೂ ನೌಶಾದ್ ಎಂಬವರ ವಿರುದ್ಧ ಈ ಕೇಸು ದಾಖಲಾಗಿದೆ. ಆಹಾರ ಸೇವನೆಗಾಗಿ ಆಗಮಿಸಿದ ಈ ತಂಡ ಆಹಾರ ಆರ್ಡರ್ ಮಾಡಿದ್ದರು. ಇದನ್ನು ತಯಾರಿಸಿ ನೀಡುವಲ್ಲಿ ವಿಳಂಬವುಂಟಾಗಿರುವ ಬಗ್ಗೆ ಉಮ್ಮರ್ ಅವರೊಂದಿಗೆ ವಾಗ್ವಾದ ನಡೆಸಿದ ಒಬ್ಬಾತ ನೀರಿನ ಜಗ್‍ನಿಂದ ಮುಖಕ್ಕೆ ಥಳಿಸಿದ್ದರೆ, ಇತರ ಇಬ್ಬರು ಮುಖ ಹಗೂ ಬೆನ್ನಿಗೆ ಹೊಡೆದಿದ್ದಾರೆ. ಅಲ್ಲದೆ ಹೋಟೆಲ್ ಕಿಟಿಕಿ ಗಾಜು ಒಡೆದಿದ್ದು, ಇದರ ಚೂರು ಸನಿಹ ನಡೆದುಹೋಗುತ್ತಿದ್ದ ಬಾಲಕಿಗೆ ತಗುಲಿ ಗಾಯವುಂಟಾಗಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

