ಕೊಲಂಬೊ: ಟಿ20 ವಿಶ್ವಕಪ್ ಟೂರ್ನಿಯ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಲು ಪಾಕಿಸ್ತಾನ ಕೊನೆಯ ಕ್ಷಣದಲ್ಲಿ ನಿರ್ಧರಿಸಿದ ಪರಿಣಾಮ ಪಂದ್ಯದ ಆತಿಥ್ಯ ವಹಿಸಿಸಬೇಕಿದ್ದ ಶ್ರೀಲಂಕಾ ಮೇಲೆ ಈಗಾಗಲೇ ನಷ್ಟದ ಭೀತಿ ಉಂಟಾಗಿದೆ.
ಫೆ.15ರಂದು ನಡೆಯಬೇಕಿದ್ದ ಈ ಪಂದ್ಯದಲ್ಲಿ ಟಿಕೆಟ್ ಮಾರಾಟ ಹಾಗೂ ಇತರ ಮೂಲಗಳಿಂದ ದೊಡ್ಡ ಆದಾಯವನ್ನು ನಿರೀಕ್ಷಿಸಿದ್ದ ಅತಿಥೇಯ ದೇಶ, ಭಾರತದ ವಿರುದ್ಧ ಲೀಗ್ ಹಂತದ ಪಂದ್ಯ ಆಡುವಂತೆ ಪಾಕಿಸ್ತಾನದ ಮೊರೆ ಹೋಗಿದೆ.ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಸಿ, ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು. ಇದರ ಅನ್ವಯ ಗುರುವಾರ ಮನವಿಪತ್ರವನ್ನು ಪಿಸಿಬಿಗೆ ಕಳುಹಿಸಲಾಗಿದೆ.
ಈ ಪಂದ್ಯದಲ್ಲಿ ಪಾಕಿಸ್ತಾನ ಆಡದೇ ಇದ್ದಲ್ಲಿ, ಇದು ಮಂಡಳಿಯ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬ ಆತಂಕ ಶ್ರೀಲಂಕಾಕ್ಕೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ. ಪಂದ್ಯದ ಟಿಕೆಟ್‍ಗಳು ಈಗಾಗಲೇ ಸಂಪೂರ್ಣ ಬುಕ್ ಆಗಿರುವ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಪಂದ್ಯ ನಡೆಯದಿದ್ದಲ್ಲಿ ಪ್ರಸಾರ ಸಂಸ್ಥೆಯಿಂದ ಐಸಿಸಿ ನೀಡುವ ಮೊತ್ತವೂ ರದ್ದಾಗಲಿದೆ.
ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಪಾಕಿಸ್ತಾನದಿಂದ ಸಹಾಯ ನಿರೀಕ್ಷಿಸುತ್ತಿದ್ದು, ಆಡಲು ಅನುಕೂಲಕರ ವಾತಾವರಣ ಇಲ್ಲದಿದ್ದರೂ, ಪಾಕಿಸ್ತಾನ ಪ್ರವಾಸ ಕೈಗೊಂಡು ಆ ದೇಶಕ್ಕೆ ನೆರವಾದಂತೆ ಈ ಸಂದಿಗ್ಧ ಸ್ಥಿತಿಯಲ್ಲಿ ನೆರವಿಗೆ ಬರಬೇಕು ಎಂದು ಶ್ರೀಲಂಕಾ ಮನವಿ ಮಾಡಿದೆ. 2009ರಲ್ಲಿ ಶ್ರೀಲಂಕಾ ತಂಡದ ಬಸ್ಸಿನ ಮೇಲೆ ದಾಳಿ ನಡೆದ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದು ನಿಲ್ಲಿಸಿದ್ದನ್ನೂ ಉಲ್ಲೇಖಿಸಲಾಗಿದೆ.

