ನ್ಯಾಯಾಂಗ ಅಧಿಕಾರಿಗಳು ಹಕ್ಕುದಾರಿಕೆ ಹಾಗೂ ಆಕ್ಷೇಪಗಳ ಕುರಿತು ಪರಿಶೀಲಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, "ಪರಸ್ಪರ ಆರೋಪ ಮತ್ತು ಪ್ರತ್ಯಾರೋಪದ ದುರದೃಷ್ಟಕರ ಪರಿಸ್ಥಿತಿ ಉದ್ಭವವಾಗಿದ್ದು, ಇದು ಎರಡು ಸಾಂವಿಧಾನಿಕ ಅಂಗಗಳ ನಡುವಿನ ವಿಶ್ವಾಸದ ಕೊರತೆಯನ್ನು ಸೂಚಿಸುತ್ತಿದೆ. ಅದು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ವಿಶ್ವಾಸದ ಕೊರತೆಯಾಗಿದೆ. ಇದೀಗ ಈ ಪ್ರಕ್ರಿಯೆಯು ವ್ಯತ್ಯಾಸ ಪಟ್ಟಿಗೆ ಸೇರ್ಪಡೆಯಾಗಿರುವ ಜನರ ಹಕ್ಕುದಾರಿಕೆ ಹಾಗೂ ಆಕ್ಷೇಪಗಳ ಹಂತದಲ್ಲಿ ಸಿಲುಕಿಕೊಂಡಿದೆ" ಎಂದು ಅಭಿಪ್ರಾಯಪಟ್ಟರು.
"ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಜಿಲ್ಲಾ ನ್ಯಾಯಾಧೀಶರ ದರ್ಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲಿ ಮತ್ತು ಮಾಜಿ ನ್ಯಾಯಾಂಗ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ" ಎಂದು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಸಾಮಾನ್ಯ ಸನ್ನಿವೇಶಗಳ ಕಾರಣಕ್ಕೆ ನಾವು ಅಸಾಮಾನ್ಯ ಆದೇಶವನ್ನು ಹೊರಡಿಸಬೇಕಾಗಿ ಬಂದಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿತು.
ನ್ಯಾಯಾಂಗ ಅಧಿಕಾರಿಗಳ ಯೋಜನೆಯ ಸೂಕ್ಷ್ಮ ವಿವರಗಳನ್ನು ಅಂತಿಮಗೊಳಿಸಲು ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರೊಂದಿಗೆ ನಾಳೆ (ಶನಿವಾರ) ರಾಜ್ಯ ಚುನಾವಣಾ ಆಯೋಗ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರು ಹಾಗೂ ಇನ್ನಿತರ ಉನ್ನತ ಅಧಿಕಾರಿಗಳು ಸಭೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
"ಎಸ್‌ಡಿಒ ಮತ್ತು ಎಸ್‌ಡಿಎಂ ಕರ್ತವ್ಯವನ್ನು ನಿರ್ವಹಿಸಲು ಎ ಗುಂಪಿನ ಅಧಿಕಾರಿಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಬಾಧ್ಯತೆಯಾಗಿದೆ. ಇಆರ್‌ಒ ಮತ್ತು ಎಇಆರ್‌ಒ ಕರ್ತವ್ಯವನ್ನು ನಿರ್ವಹಿಸಲು ರಾಜ್ಯ ಸರ್ಕಾರ ಒದಗಿಸಿರುವ ಅಧಿಕಾರಿಗಳ ದರ್ಜೆಯ ಬಗ್ಗೆ ವಾದಿ-ಪ್ರತಿವಾದಿಗಳ ನಡುವೆ ವ್ಯಾಜ್ಯವಿದೆ. ಇದೀಗ ರಾಜ್ಯ ಸರ್ಕಾರ ಒದಗಿಸಿರುವ, ಭಾರತೀಯ ಚುನಾವಣಾ ಆಯೋಗ ನಿಯೋಜಿಸಿರುವ ಅಧಿಕಾರಿಗಳ ಸ್ಥಾನಮಾನ ಮತ್ತು ದರ್ಜೆಯನ್ನು ನಿರ್ಧರಿಸುವುದು ನ್ಯಾಯಾಲಯಕ್ಕೆ ಅಸಾಧ್ಯ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಸಲ್ಲಿಸಲಾದ ದಾಖಲೆಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಮತಪಟ್ಟಿಗೆ ಆಗುವ ಸೇರ್ಪಡೆ ಅಥವಾ ತೆಗೆದುಹಾಕುವಿಕೆಯ ನೈಜತೆಯನ್ನು ನಿರ್ಧರಿಸುವಲ್ಲಿ ನ್ಯಾಯಪರತೆಯನ್ನು ಖಾತರಿಗೊಳಿಸಲು, ಎಡಿಜೆ ಅಥವಾ ಜಿಲ್ಲಾ ನ್ಯಾಯಾಧೀಶರ ದರ್ಜೆಯ ಕೆಲವು ಹಾಲಿ ನ್ಯಾಯಾಂಗ ಅಧಿಕಾರಿಗಳೊಂದಿಗೆ ಕೆಲವು ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನು ಬಿಡುಗಡೆಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡದೆ ಬೇರೆ ಆಯ್ಕೆಯೇ ಉಳಿದಿಲ್ಲ. ಈ ನ್ಯಾಯಾಧೀಶರು ಪ್ರತಿ ಜಿಲ್ಲೆಯಲ್ಲೂ ತಾರ್ಕಿಕ ವ್ಯತ್ಯಾಸ ಪಟ್ಟಿಯಲ್ಲಿರುವ ಹಕ್ಕುದಾರಿಕೆಯನ್ನು ವಿಲೇವಾರಿ ಮಾಡುವ ಅಥವಾ ಮರುಪರಿಶೀಲನೆ ಮಾಡುವ ಕೆಲಸದಲ್ಲಿ ನೆರವು ಒದಗಿಸಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ನ್ಯಾಯಾಂಗ ಅಧಿಕಾರಿಗಳು ಮಧ್ಯಪ್ರವೇಶಿಸಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ನಾವು ರಾಜ್ಯ ಸರ್ಕಾರದ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ, ಇದು ರಾಜ್ಯ ಸರ್ಕಾರದ ಸಹಕಾರದ ಮಟ್ಟವೆ? ಫೆಬ್ರವರಿ 9ರ ಆದೇಶಕ್ಕೆ ನೀವು ಫೆಬ್ರವರಿ 17ರಂದು ಪ್ರತಿಕ್ರಿಯೆ ಸಲ್ಲಿಸಿದ್ದೀರಿ. ರಾಜ್ಯ ಸರ್ಕಾರವು ಅಧಿಕಾರಿಗಳನ್ನು ಪರಿಶೀಲಿಸುತ್ತಿದೆ ಎಂದು ನೀವು ಹೇಳುತ್ತಿದ್ದೀರಿ. ಯಾವ ರೀತಿ ಪರಿಶೀಲಿಸುತ್ತಿದ್ದೀರಿ? ನೀವು 8,500 ಅಧಿಕಾರಿಗಳನ್ನು ರವಾನಿಸಲಾಗಿದೆ ಎಂದು ಬರೆಯಬೇಕಿತ್ತು. ನಾವು ಸೂಕ್ಷ್ಮ ವೀಕ್ಷಕರಲ್ಲ. ಇದನ್ನು ನೋಡಿ ನಮಗೆ ಬೇಸರವಾಗಿದೆ. ರಾಜ್ಯ ಸರ್ಕಾರಗಳು ಸಹಕಾರ ನೀಡುತ್ತವೆ ಎಂದು ನಾವು ಭಾವಿಸಿದ್ದೆವು. ನಮಗೆ ಖಾಸಗಿ ವಿವರಣೆಗಳ ಅಗತ್ಯವಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಬಿಜೆಪಿ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿರುಸಿನ ತಯಾರಿ ನಡೆಸುತ್ತಿವೆ. ಈ ನಡುವೆ, ಮತಪಟ್ಟಿಗಳನ್ನು ಪರಿಷ್ಕರಿಸುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನವನ್ನು ನೈಜ ಮತದಾರರನ್ನು ಕೈಬಿಡಲು ಬಳಸಿಕೊಳ್ಳಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಹತ್ವ ಪಡೆದುಕೊಂಡಿದೆ.

