ವಾಷಿಂಗ್ಟನ್: ಇನ್ನೂ 10 ದಿನ ಇರಾನ್‌ನ ಇಂಧನ ಸ್ಥಾವರಗಳ ಮೇಲೆ ನಾವು ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಗುರುವಾರ ಶ್ವೇತ ಭವನದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಹಿಂದೆ ದಾಳಿಗೆ 48 ಗಂಟೆ ತಡೆ ನೀಡಿದ್ದ ಗಡುವನ್ನು ಟ್ರಂಪ್ ವಿಸ್ತರಿಸಿದ್ದಾರೆ.
ಇರಾನ್‌ನ ಕೋರಿಕೆಯ ಮೇಲೆ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಶಾಂತಿ ಒಪ್ಪಂದಕ್ಕೆ ಮಾತುಕತೆಗಳು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿವೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ 6ರವರೆಗೆ ನಾವು ಇರಾನ್‌ನ ಇಂಧನ ಸ್ಥಾವರಗಳ ಮೇಲೆ ಯಾವುದೇ ದಾಳಿ ಮಾಡುವುದಿಲ್ಲ. ಇದು ಇರಾನ್ ಸರ್ಕಾರದ ಕೋರಿಕೆಯ ಮೇರೆಗೆ ನಾವು ಕೈಗೊಂಡ ನಿರ್ಧಾರ. ಸುಳ್ಳು ಸುದ್ದಿಗಳ ನಡುವೆಯೂ ನಮ್ಮ ಸಂಧಾನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ.
ಆದರೆ, ಈ ಬಗ್ಗೆ ಇರಾನ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'ಅಮೆರಿಕ ಮುಂದಿಟ್ಟಿರುವ ಕದನ ವಿರಾಮ ಒಪ್ಪಂದ ಮಾತುಕತೆ ಪ್ರಸ್ತಾವವನ್ನು ಇರಾನ್ ಗಂಭೀರವಾಗಿ ಪರಿಗಣಿಸಬೇಕು' ಎಂದು ಟ್ರಂಪ್ ಈ ಮೊದಲು ಎಚ್ಚರಿಕೆ ನೀಡಿದ್ದರು. ನಂತರ ಮಾತುಕತೆ ಚೆನ್ನಾಗಿ ನಡೆಯುತ್ತಿವೆ ಎಂದು ಈಗ 10 ದಿನ ದಾಳಿಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.

