ವಾಷಿಂಗ್ಟನ್: ಅಮೆರಿಕದ ಡಾಲರ್ ಕರೆನ್ಸಿಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿ ಕಾಣಿಸಿಕೊಳ್ಳುವುದು ಸನ್ನಿಹಿತವಾಗಿದೆ.
ಈ ಕುರಿತು ಅಮೆರಿಕ ಸರ್ಕಾರದ ಹಣಕಾಸು ಇಲಾಖೆಯು ಟ್ರೆಸರರ್ (ಖಜಾಂಚಿ) ಅವರ ಸಮನ್ವಯದೊಂದಿಗೆ ನಿರ್ಧಾರ ಕೈಗೊಂಡಿದೆ.
'ಈ ವರ್ಷ ಅಮೆರಿಕ ಸ್ವಾತಂತ್ರ್ಯೋತ್ಸವದ 250ನೇ ವರ್ಷಾಚರಣೆ ಇದೆ.
ಈ ಪ್ರಯುಕ್ತ ನಮ್ಮ ಡಾಲರ್ ಕರೆನ್ಸಿ ನೋಟುಗಳಲ್ಲಿ ಅಧ್ಯಕ್ಷರ ಸಹಿ ಇರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ' ಎಂದು ಖಜಾಂಚಿ ಬ್ರಾಂಡನ್ ಬೀಚ್ ಹೇಳಿದ್ದಾರೆ.
'ಅಮೆರಿಕ ಸ್ವಾತಂತ್ರ್ಯೋತ್ಸವದ 250ನೇ ವರ್ಷಾಚರಣೆ ಪ್ರಯುಕ್ತ ಟ್ರಂಪ್ ಅವರ ಭಾವಚಿತ್ರ ಇರುವ 24 ಕ್ಯಾರಟ್ ಗೋಲ್ಡ್ ಕಾಯಿನ್‌ಗಳನ್ನು ಬಿಡುಗಡೆ ಮಾಡಲಾಗುವುದು' ಎಂದು ಈ ತಿಂಗಳಾರಂಭದಲ್ಲಿ ಅಲ್ಲಿನ ಹಣಕಾಸು ಇಲಾಖೆ ಹೇಳಿತ್ತು.
ಪ್ರಸ್ತುತ 1861ರ ಯುಎಸ್ ಡಾಲರ್ ಕಾಯ್ದೆ ಪ್ರಕಾರ ಡಾಲರ್ ಕರೆನ್ಸಿಯ ಎಡ ಭಾಗದಲ್ಲಿ ಅಮೆರಿಕದ 'ಸೆಕ್ರೆಟರಿ ಆಫ್ ಟ್ರೆಸರಿ' ಅವರ ಸಹಿ, ಬಲ ಭಾಗದಲ್ಲಿ 'ಟ್ರೆಸರರ್ ಆಫ್ ಯುನೈಟೆಡ್ ಸ್ಟೆಟ್ಸ್' ಅವರ ಸಹಿ ಇರುತ್ತವೆ.
ಇದೀಗ, 'ಕಾಯ್ದೆಗೆ ಬದಲಾವಣೆ ತಂದು ಸೆಕ್ರೆಟರಿ ಆಫ್ ಟ್ರೆಸರಿ ಅವರ ಪಕ್ಕದಲ್ಲಿ ಅಮೆರಿಕದ ಅಧ್ಯಕ್ಷರ ಸಹಿ ಇರುವಂತೆ ನೋಡಿಕೊಳ್ಳಲಾಗುವುದು' ಎಂದು ಬ್ರಾಂಡನ್ ಬೀಚ್ ತಿಳಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರಕಟಣೆ ನೀಡಿರುವ 'ಸೆಕ್ರೆಟರಿ ಆಫ್ ಟ್ರೆಸರಿ' ಸ್ಕಾಟ್ ಬೇಸೆಂಟ್ ಅವರು, 'ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಸರಿ ದಾರಿಗೆ ಬಂದಿದೆ. ಅಭಿವೃದ್ಧಿಯಲ್ಲಿ ಸ್ಥಿರತೆ ಕಂಡಿದೆ. ಸ್ವಾತಂತ್ರ್ಯೋತ್ಸವದ 250ನೇ ವರ್ಷಾಚರಣೆ ಸಂದರ್ಭದಲ್ಲಿ ಟ್ರಂಪ್ ಆಡಳಿತ ಒಂದು ಸುವರ್ಣಯುಗ. ಈ ಸುವರ್ಣಯುಗದಲ್ಲಿ ನಮ್ಮ ಕರೆನ್ಸಿಗಳಲ್ಲಿ ಅವರ ಸಹಿ ಇರುವುದು ಅತ್ಯಂತ ಅರ್ಹವಾದ ವಿಚಾರವಾಗಿದೆ' ಎಂದು ಹೇಳಿದ್ದಾರೆ.

