ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ(Middle East Crisis) ದಶಕಗಳಿಂದ ಹೊಗೆಯಾಡುತ್ತಿದ್ದ ಕಿಡಿ ಈಗ ಜ್ವಾಲೆಯಾಗಿ ಸ್ಫೋಟಗೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ವೈಮಾನಿಕ ದಾಳಿ ನಡೆಸುವ ಮೂಲಕ ಯುದ್ಧವನ್ನು ನೇರ ಸಂಘರ್ಷಕ್ಕೆ ದೂಡಿವೆ. ಇಸ್ರೇಲಿ ಮಿಲಿಟರಿ ಮೂಲಗಳ ಪ್ರಕಾರ, ಕಳೆದ ಹಲವು ತಿಂಗಳುಗಳ ತೀವ್ರ ಮತ್ತು ಜಂಟಿ ಯೋಜನೆಯ ಫಲವಾಗಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ದಾಳಿಯ ಕೇಂದ್ರಬಿಂದು ಯಾರು..?
ಈ ಬಾರಿಯ ದಾಳಿಯು ಕೇವಲ ಸೇನಾ ನೆಲೆಗಳಿಗೆ ಸೀಮಿತವಾಗಿಲ್ಲ. ಇರಾನ್‌ನ ಅತ್ಯುನ್ನತ ನಾಯಕ ಆಯತೊಲ್ಲಾ ಅಲಿ ಖಮೇನಿ, ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ರಾಜಕೀಯ ಮತ್ತು ಮಿಲಿಟರಿ ನಾಯಕತ್ವದ ಬೆನ್ನೆಲುಬು ಮುರಿಯುವುದು ಈ ದಾಳಿಯ ಮುಖ್ಯ ಉದ್ದೇಶವೆಂದು ತೋರುತ್ತಿದೆ.
ಇರಾನ್‌ನ ಪ್ರತಿದಾಳಿ: ಗಡಗಡ ನಡುಗಿದ ಅರಬ್ ರಾಷ್ಟ್ರಗಳು
ಅಮೆರಿಕ ಮತ್ತು ಇಸ್ರೇಲ್ ದಾಳಿಗೆ ಇರಾನ್ ಸುಮ್ಮನೆ ಕೂತಿಲ್ಲ. ಪ್ರತಿಯಾಗಿ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಇಸ್ರೇಲ್‌ನ ಪ್ರಮುಖ ಗುರಿಗಳ ಮೇಲೆ ಇರಾನ್ ಕ್ಷಿಪಣಿಗಳ ಮಳೆ ಸುರಿಸಿದೆ. ಸಿಎನ್‌ಎನ್ ವರದಿಯ ಪ್ರಕಾರ, ಇಸ್ರೇಲ್ ಮಾತ್ರವಲ್ಲದೆ ಬಹ್ರೇನ್, ಅಬುಧಾಬಿ, ದುಬೈ, ಕುವೈತ್, ರಿಯಾದ್ ಮತ್ತು ಕತಾರ್‌ನ ಹಲವು ಭಾಗಗಳಲ್ಲಿ ಭೀಕರ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಈ ಪ್ರದೇಶಗಳಲ್ಲಿ ಅಮೆರಿಕದ ಸೇನಾ ನೆಲೆಗಳಿರುವುದು ಇರಾನ್‌ನ ಕೆಂಗಣ್ಣಿಗೆ ಕಾರಣವಾಗಿದೆ.
ಯಾರು ಯಾರ ಪರ..?: ವಿಭಜನೆಯಾದ ವಿಶ್ವ
ಈ ಸಂಘರ್ಷವು ಇಡೀ ಜಗತ್ತನ್ನು ಎರಡು ಬಣಗಳನ್ನಾಗಿ ಮಾಡಿದೆ. ಇರಾನ್ ಪರವಾಗಿ ಮತ್ತು ಅಮೆರಿಕದ ಪರವಾಗಿ ನಿಂತಿರುವ ದೇಶಗಳ ವಿವರ ಇಲ್ಲಿದೆ.
ಇರಾನ್ ಬೆನ್ನಿಗೆ ನಿಂತವರು ಯಾರು?
ಇರಾನ್ ಪ್ರಸ್ತುತ ಪ್ರಾದೇಶಿಕವಾಗಿ ಏಕಾಂಗಿಯಾದಂತೆ ಕಂಡರೂ, ತನ್ನ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಮೂಲಕ ಹೋರಾಟ ಮುಂದುವರಿಸಿದೆ.
ಇದನ್ನೂ ಓದಿ: ಇರಾನ್ ಆಡಳಿತದ ಶಿರಚ್ಛೇದಕ್ಕೆ ಇಸ್ರೇಲ್ ಸ್ಕೆಚ್? ಖಮೇನಿ ಕಚೇರಿ ಮೇಲೆ ಬಾಂಬ್ ಮಳೆ! Khamenei Targeted
ಪ್ರಾದೇಶಿಕ ಮಿತ್ರರು: ಲೆಬನಾನ್‌ನ ಹಿಜ್ಬುಲ್ಲಾ, ಇರಾಕ್‌ನ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (PMF), ಯೆಮನ್‌ನ ಹೌತಿ ಬಂಡುಕೋರರು ಮತ್ತು ಗಾಜಾದ ಹಮಾಸ್ ಗುಂಪುಗಳು ಇರಾನ್‌ಗೆ ಬೆಂಬಲವಾಗಿವೆ.
ರಷ್ಯಾ ಮತ್ತು ಚೀನಾ: ಕಳೆದ ಒಂದು ವಾರದಿಂದ ಇರಾನ್, ರಷ್ಯಾ ಮತ್ತು ಚೀನಾ ನಡುವೆ ಮಿಲಿಟರಿ ಸಹಕಾರ ತೀವ್ರಗೊಂಡಿದೆ. ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಅಮೆರಿಕದ ಕ್ರಮವನ್ನು ಖಂಡಿಸಿದ್ದು, ಅಮೆರಿಕಕ್ಕೆ ಕೇವಲ 249 ವರ್ಷಗಳ ಇತಿಹಾಸವಿದೆ, ಆದರೆ ಪರ್ಷಿಯನ್ ಸಾಮ್ರಾಜ್ಯವು 2,500 ವರ್ಷಗಳ ಹಳೆಯದು. 100 ವರ್ಷಗಳ ನಂತರ ಏನಾಗುತ್ತದೆ ಎಂದು ನೋಡೋಣ ಎಂದು ಸವಾಲು ಹಾಕಿದ್ದಾರೆ.
ಪಾಕಿಸ್ತಾನದ ನಿಲುವು: ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಪರಮಾಣು ಶಕ್ತಿ ಹೊಂದಿರುವ ಏಕೈಕ ದೇಶವಾದ ಪಾಕಿಸ್ತಾನವು ಇರಾನ್‌ನೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ, 2025ರ ಜೂನ್‌ನಲ್ಲಿ ನಡೆದ 12 ದಿನಗಳ ಯುದ್ಧದ ಸಮಯದಲ್ಲಿ ಇರಾನ್‌ನಿಂದ ದೂರ ಉಳಿಯುವ ಮೂಲಕ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಪರವಾಗಿ ಯಾರಿದ್ದಾರೆ..?
ಅಮೆರಿಕದ ಪರವಾಗಿ ಅರಬ್ ರಾಷ್ಟ್ರಗಳು ಮತ್ತು ಪಾಶ್ಚಿಮಾತ್ಯ ದೇಶಗಳು ಒಗ್ಗಟ್ಟು ಪ್ರದರ್ಶಿಸಿವೆ.
ಅರಬ್ ಒಕ್ಕೂಟ: ಯುಎಇ, ಕತಾರ್ ಮತ್ತು ಕುವೈತ್ ರಾಷ್ಟ್ರಗಳು ಇರಾನ್‌ನ ಕ್ಷಿಪಣಿ ದಾಳಿಯನ್ನು ತೀವ್ರವಾಗಿ ಖಂಡಿಸಿವೆ. ತಮ್ಮ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ ಎಂದು ಹೇಳಿರುವ ಈ ದೇಶಗಳು, ಪ್ರತಿದಾಳಿ ನಡೆಸುವ ಹಕ್ಕನ್ನು ಕಾಯ್ದಿರಿಸಿಕೊಂಡಿವೆ.
ಸೌದಿ ಅರೇಬಿಯಾ: ಸೌದಿ ಅರೇಬಿಯಾವು ತನ್ನ ನೆರೆಯ ಅರಬ್ ರಾಷ್ಟ್ರಗಳ ಮೇಲಿನ ದಾಳಿಯನ್ನು ಖಂಡಿಸಿದ್ದು, ಅವರ ರಕ್ಷಣೆಗೆ ಬದ್ಧವಾಗಿರುವುದಾಗಿ ಘೋಷಿಸಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳು: ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಟೀಕಿಸಿವೆ. ಫ್ರಾನ್ಸ್ ತನ್ನ ಮಿಲಿಟರಿ ನೆಲೆಗಳ ರಕ್ಷಣೆಗೆ ಸಿದ್ಧವಾಗಿರುವುದಾಗಿ ತಿಳಿಸಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಇರಾನ್‌ನ ನಾಗರಿಕ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದಾರೆ.
ಮುಂದೇನು..?
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಈ ಬಿಕ್ಕಟ್ಟು ಕೇವಲ ಎರಡು ದೇಶಗಳ ನಡುವಿನ ಯುದ್ಧವಾಗಿ ಉಳಿಯದೆ, ಜಾಗತಿಕ ಮಟ್ಟದ ಬಿಕ್ಕಟ್ಟಾಗಿ ಮಾರ್ಪಡುತ್ತಿದೆ. ಕ್ಷಿಪಣಿಗಳ ಆರ್ಭಟ ಮತ್ತು ಹೆಚ್ಚುತ್ತಿರುವ ಸಾವು-ನೋವುಗಳು ಮೂರನೇ ಮಹಾಯುದ್ಧದ ಮುನ್ಸೂಚನೆಯೇ ಎಂಬ ಆತಂಕವನ್ನು ಮೂಡಿಸಿದೆ.

