ಬೈರೂತ್ (ರಾಯಿಟರ್ಸ್): ಪೂರ್ವ ಲೆಬನಾನ್‌ನಲ್ಲಿ ಇಸ್ರೇಲ್ ಪಡೆ ನಡೆಸಿದ ದಾಳಿಯಲ್ಲಿ ಲೆಬನಾನ್‌ನ ಮೂವರು ಸೈನಿಕರು ಸೇರಿದಂತೆ 41 ಮಂದಿ ಸಾವಿಗೀಡಾಗಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ನಬಿ ಶೀತ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನಡೆದ ದಾಳಿಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 3 ಲಕ್ಷಕ್ಕೂ ಅಧಿಕ ಮಂದಿಯನ್ನು ಸರ್ಕಾರಿ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ಡ್ರೋನ್ ಮತ್ತು ರಾಕೆಟ್‌ಗಳ ಮೂಲಕ ಸೋಮವಾರ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಭಾರಿ ದಾಳಿ ಮುಂದುವರಿಸಿದೆ.
ಕಮಾಂಡೊ ಕಾರ್ಯಾಚರಣೆ:
ಲೆಬನಾನ್‌ನ ಬೈರೂತ್‌ನಲ್ಲಿ ಹೆಲಿಕಾಪ್ಟರ್ ಮೂಲಕ ಇಸ್ರೇಲ್ ತನ್ನ ಕಮಾಂಡೊಗಳನ್ನು ಇಳಿಸಿ ಶನಿವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. 1986ರಿಂದ ಕಾಣೆಯಾಗಿರುವ ಇಸ್ರೇಲ್ ವಾಯುಪಡೆ ಪೈಲಟ್ ರಾನ್ ಅರಾದ್ ಅವರ ಕುರಿತು ಮಾಹಿತಿ ಕಲೆ ಹಾಕಲು ಸ್ಥಳದಲ್ಲಿ ಕೆಲಕಾಲ ಶೋಧ ನಡೆಸಿದೆ. ಆದರೆ ಈ ವೇಳೆ ಯಾವುದೇ ಕುರುಹು ಪತ್ತೆಯಾಗಿಲ್ಲ ಎನ್ನಲಾಗಿದೆ.
1986ರಲ್ಲಿ ನಡೆದ ಕಾರ್ಯಾಚರಣೆ ವೇಳೆ ಲೆಬನಾನ್‌ನಲ್ಲಿ ವಿಮಾನ ಪತನೊಂಡಾಗ ಕೆಳಕ್ಕೆ ಜಿಗಿದಿದ್ದ ಅರಾದ್ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅರಾದ್ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದೆ. ಆದರೂ, ಮೃತದೇಹ ಅಥವಾ ಅವಶೇಷಗಳನ್ನು ಇದುವರೆಗೂ ಇಸ್ರೇಲ್‌ಗೆ ಹಸ್ತಾಂತರಿಸಲಾಗಿಲ್ಲ.

