ಇದರಿಂದ ಕಚ್ಚಾ ತೈಲ ಬೆಲೆ ಹೆಚ್ಚಿದ್ದು. ಅನಿಲ ಮತ್ತು ತೈಲ ಸರಬರಾಜಿಗೆ ಅಡಚಣೆಯುಂಟಾಗಿದೆ. ಯುದ್ಧದ ಪರಿಣಾಮಗಳು ಈಗ ಎಲ್ಲೆಡೆ ಕಾಣಿಸಿಕೊಳ್ಳತೊಡಗಿದೆ.
ಸಂಘರ್ಷ ತೀವ್ರಗೊಂಡರೆ, ಭಾರತದ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಲಿದೆ. ಏಕೆಂದರೆ ಭಾರತವು ಇಂಧನ (ತೈಲ ಮತ್ತು ಅನಿಲ) ಮತ್ತು ಅಲ್ಲಿ ಕೆಲಸ ಮಾಡುವ ಅನೇಕ ಭಾರತೀಯರು ಮನೆಗೆ ಕಳುಹಿಸುವ ಹಣ ಈ ಎರಡು ವಿಷಯಗಳಲ್ಲಿ ಮಧ್ಯಪ್ರಾಚ್ಯವನ್ನು ಅವಲಂಬಿಸಿರುವಂತಹ ಬೃಹತ್ ಆರ್ಥಿಕತೆಯಾಗಿದೆ.
►ಭಾರತದ ಮೇಲೆ ಇದು ಯಾವ ರೀತಿ ಪರಿಣಾಮ ಬೀರಲಿದೆ?
-ಇಂಧನ ಕೊರತೆ
ಭಾರತದ ಶೇಕಡಾ 80 ಕ್ಕಿಂತ ಹೆಚ್ಚು ಅನಿಲ ಮತ್ತು ಶೇಕಡಾ 60 ರಷ್ಟು ತೈಲವು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಇದು ಗಲ್ಫ್ ಅನ್ನು ಒಮಾನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಪ್ರಸ್ತುತ ಇರಾನ್ ಈ ಮೂಲಕ ಬರುವ ಎಲ್ಲಾ ಹಡಗು ಸಾಗಣೆಗೆ ಬೆದರಿಕೆ ಹಾಕುವ ಮೂಲಕ, ಹಾರ್ಮುಝ್ ಜಲಸಂಧಿಯನ್ನು ಮುಚ್ಚಿದೆ. ಹಾಗಾಗಿ ಗಲ್ಫ್ ತೈಲ ಉತ್ಪಾದಕರಿಗೆ ತೈಲ ಮತ್ತು ಎಲ್‌ಎನ್‌ಜಿಯನ್ನು ತಲುಪಿಸಲು ಯಾವುದೇ ಸಮುದ್ರ ಮಾರ್ಗವಿಲ್ಲ.
ಈ ಪ್ರದೇಶವು ತುಂಬಾ ಅಪಾಯಕಾರಿಯಾಗಿರುವುದರಿಂದ ಹೆಚ್ಚಿನ ವಿಮಾ ಕಂಪನಿಗಳು ಈ ಪ್ರದೇಶದ ಮೂಲಕ ತೈಲ ಸಾಗಿಸುವ ಹಡಗುಗಳಿಗೆ ವಿಮೆ ನೀಡುವುದನ್ನು ನಿಲ್ಲಿಸಿವೆ. ಬುಧವಾರ ಭಾರತಕ್ಕೆ ಪ್ರಯಾಣಿಸುತ್ತಿದ್ದ ಥೈಲ್ಯಾಂಡ್‌ನ ಹಡಗಿನ ಮೇಲೆ ದಾಳಿ ಮಾಡಲಾಯಿತು. ಇದನ್ನು ಭಾರತ ಖಂಡಿಸಿದೆ.
ಭಾರತದಲ್ಲಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಒಂದೊಂದೇ ಮುಚ್ಚಲು ಶುರು ಮಾಡಿವೆ. ಸರ್ಕಾರವು ಸಾರ್ವಜನಿಕರಿಗೆ ಸುಮಾರು ಒಂದು ತಿಂಗಳ ಪೂರೈಕೆಯನ್ನು ಸಂಗ್ರಹದಲ್ಲಿ ಹೊಂದಿದೆ ಎಂದು ಭರವಸೆ ನೀಡಿದ್ದರೂ ಸಹ ಇಂಧನ ಕೊರತೆಯ ಆತಂಕದ ನಡುವೆ ಜನರು ಎಲ್‌ಪಿಜಿ (ಅಡುಗೆ ಅನಿಲ) ಸಿಲಿಂಡರ್‌ಗಳನ್ನು ಸಂಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಪ್ರತೀಕಾರದ ದಾಳಿಗಳನ್ನು ಸಮರ್ಥಿಸಿಕೊಳ್ಳಲು ಇರಾನ್ ಆತ್ಮರಕ್ಷಣೆಯ ಹಕ್ಕನ್ನು ಪ್ರತಿಪಾದಿಸಿದ್ದು ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಜಲಸಂಧಿಯನ್ನು ನಿಯಂತ್ರಣದಲ್ಲಿರಿಸಿಕೊಂಡಿದೆ. ಅಮೆರಿಕ-ಇಸ್ರೇಲಿ ದಾಳಿಯ ಮಧ್ಯೆ ಇರಾನ್‌ನಾದ್ಯಂತ 1,300 ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದು, ಅಪಾರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.
ಇದೀಗ ಇರಾನ್‌ನ ತಂತ್ರಗಳು ಕೆಲಸ ಮಾಡುತ್ತಿರುವಂತೆ ತೋರುತ್ತಿದೆ. ಷೇರುಗಳು ಕುಸಿದಿವೆ ಮತ್ತು ತೈಲ ಬೆಲೆಗಳು ಏರಿಕೆಯಾಗಿವೆ. ರವಿವಾರ ಬ್ಯಾರೆಲ್ ಬೆಲೆ 120 ಡಾಲರ್ ತಲುಪಿವೆ, ನಂತರ ಈ ವಾರ ಸುಮಾರು 100 ಡಾಲರ್ ನಲ್ಲಿ ಸ್ಥಿರವಾಗಿದೆ. ಇದು ಯುದ್ಧ ಪ್ರಾರಂಭವಾಗುವ ಮೊದಲು ಇದ್ದಕ್ಕಿಂತ ಇನ್ನೂ ಸುಮಾರು 40 ಡಾಲರ್ ಹೆಚ್ಚಾಗಿದೆ. ಈ ವಾರ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಒಂದು ಲೀಟರ್ ತೈಲವನ್ನು ಕೂಡಾ ಜಲಸಂಧಿಯನ್ನು ಹಾದುಹೋಗಲು ಬಿಡುವುದಿಲ್ಲ ಎಂದು ಹೇಳಿದ್ದು ತೈಲವು ಬ್ಯಾರೆಲ್‌ಗೆ 200 ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಜಗತ್ತಿಗೆ ಎಚ್ಚರಿಕೆ ನೀಡಿದೆ.
ಬುಧವಾರ, ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) 400 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಿಡುಗಡೆ ಬಿಡುಗಡೆ ಮಾಡಿತು. ಹಾಗಿದ್ದರೂ, ಇದು ತೈಲ ಬೆಲೆಗಳು ಬದಲಾಗುವುದನ್ನು ಅಥವಾ ಏರುವುದನ್ನು ನಿಲ್ಲಿಸಲು ವಿಫಲವಾಗಿದೆ.
ಭಾರತವು ತನ್ನ ಇಂಧನ ಅವಶ್ಯಕತೆಗಳ ಗಣನೀಯ ಭಾಗಕ್ಕೆ ಮಧ್ಯಪ್ರಾಚ್ಯವನ್ನು ಅವಲಂಬಿಸಿರುವುದರಿಂದ ಅದರ ಇಂಧನ ಭದ್ರತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ಹೊಸದಿಲ್ಲಿಯ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಥಿಂಕ್ ಟ್ಯಾಂಕ್‌ನ ಉಪಾಧ್ಯಕ್ಷ ಹರ್ಷ್ ವಿ ಪಂತ್ ಹೇಳಿದರು.
ಇಂಧನ ಮಾರುಕಟ್ಟೆಗಳು ಈಗಾಗಲೇ ಅಸ್ಥಿರವಾಗಿದ್ದು, ವೆಚ್ಚಗಳು ಹೆಚ್ಚುತ್ತಿವೆ. ಇದು ಅಂತಿಮವಾಗಿ ವಿಶಾಲ ಆರ್ಥಿಕ ಮತ್ತು ಹಣದುಬ್ಬರದ ಒತ್ತಡಗಳಿಗೆ ಕಾರಣವಾಗಬಹುದು ಎಂದಿದ್ದಾರೆ ಪಂತ್.
►ಗಲ್ಫ್‌ನಲ್ಲಿರುವ ಭಾರತೀಯ ವಲಸಿಗರು
ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಖತರ್, ಒಮಾನ್ , ಕುವೈತ್ ಮತ್ತು ಬಹರೈನ್ - ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಲ್ಲಿ ಕೆಲಸ ಮಾಡುವ ಸುಮಾರು 9.1 ಮಿಲಿಯನ್ ನಾಗರಿಕರ ಬಗ್ಗೆಯೂ ಭಾರತ ಚಿಂತಿತವಾಗಿದೆ. ಅವರು ವಾರ್ಷಿಕ ಸುಮಾರು 50 ಬಿಲಿಯನ್ ಡಾಲರ್ ಹಣವನ್ನು ಮನೆಗೆ ಕಳುಹಿಸುತ್ತಾರೆ.
ಯುದ್ಧವು ದೀರ್ಘಕಾಲದವರೆಗೆ ಮುಂದುವರಿದರೆ, ಹಣ ರವಾನೆಯಲ್ಲಿ ನಷ್ಟಕ್ಕೆ ಕಾರಣವಾಗುತ್ತದೆ. ಅದರ ಒಂದು ಭಾಗವು ವ್ಯಾಪಾರ ಸಮತೋಲನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಭಾರತೀಯ ಆರ್ಥಿಕತೆಯ ವ್ಯಾಪಕ ಆರ್ಥಿಕ ದೃಢತೆಗೆ ಹಾನಿ ಮಾಡುತ್ತದೆ. ಹೆಚ್ಚಿನ ಬೆಳವಣಿಗೆಯ ದರವನ್ನು ಮುಂದುವರಿಸುವ ಭಾರತದ ಭರವಸೆಗೆ ಧಕ್ಕೆಯಾಗುತ್ತದೆ. ಇದು ಕೇವಲ ಇಂಧನ ಭದ್ರತೆಯ ಪ್ರಶ್ನೆಯಲ್ಲ ಇದು ಆರ್ಥಿಕ ಭದ್ರತೆಯ ಪ್ರಶ್ನೆಯೂ ಆಗಿದೆ ಎಂದು ಪಂತ್ ಹೇಳಿದ್ದಾರೆ.
ಗಲ್ಫ್‌ನಾದ್ಯಂತ ಹಲವಾರು ಭಾರತೀಯ ಬ್ಲೂ-ಕಾಲರ್ ಜಾಬ್ ಮಾಡುವ ಕಾರ್ಮಿಕರು ಮತ್ತು ವೃತ್ತಿಪರರು ಇದ್ದಾರೆ. ಯುದ್ಧವು ಮತ್ತಷ್ಟು ಉಲ್ಬಣಗೊಂಡರೆ ಉದ್ಯೋಗಗಳನ್ನು ಕಳೆದುಕೊಳ್ಳುವ ಭಯವಿದೆ ಎಂದು ಅವರು ಅಲ್ ಜಜೀರಾಗೆ ತಿಳಿಸಿದ್ದಾರೆ. ಇರಾನಿನ ದಾಳಿಯ ಮಧ್ಯೆ ಹಲವಾರು ತೈಲ ಮತ್ತು ಅನಿಲ ಸಂಸ್ಥೆಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.
ಈ ಕೆಲಸದಿಂದ ನಾನು ನನ್ನ ಕುಟುಂಬವನ್ನು ಪೋಷಿಸುತ್ತಿದ್ದೇನೆ. ಇದರಲ್ಲಿ ನಾನು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಆತಂಕವಿದೆ ಎಂದು ಹೆಸರು ಹೇಳಲು ಇಚ್ಛಿಸದ ಭಾರತೀಯ ನಿರ್ಮಾಣ ಕಾರ್ಮಿಕರೊಬ್ಬರು ಹೇಳಿರುವುದಾಗಿ aljazeera.com ವರದಿಯಲ್ಲಿ ಉಲ್ಲೇಖಿಸಿದೆ.
ಗಲ್ಫ್‌ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಭಾರತೀಯನು ಕನಿಷ್ಠ ನಾಲ್ಕರಿಂದ ಐದು ಜನರಿಗೆ ಸ್ವದೇಶದಲ್ಲಿ ಬೆಂಬಲ ನೀಡುತ್ತಾನೆ. ನಲವತ್ತರಿಂದ 50 ಮಿಲಿಯನ್ ಭಾರತೀಯರು ಗಲ್ಫ್‌ನಲ್ಲಿನ ತಮ್ಮ ಉದ್ಯೋಗದಿಂದ ನೇರವಾಗಿ ಪ್ರಯೋಜನ ಪಡೆಯುತ್ತಾರೆ ಎಂದು ಸೌದಿ ಅರೇಬಿಯಾದ ಮಾಜಿ ಭಾರತೀಯ ರಾಯಭಾರಿ ತಲ್ಮಿಝ್ ಅಹ್ಮದ್ ʼಅಲ್ ಜಝೀರಾʼಗೆ ತಿಳಿಸಿದರು.
ಇರಾನಿನ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯೂ ಮತ್ತೊಂದು ಕಳವಳವಾಗಿದೆ. ಗಲ್ಫ್‌ನಾದ್ಯಂತ ಇರಾನಿನ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಭಾರತೀಯರು ಸೇರಿದಂತೆ ಹಲವಾರು ಏಷ್ಯಾದ ಕಾರ್ಮಿಕರು ಸೇರಿದ್ದಾರೆ.
►ಭಾರತವು ಒಂಬತ್ತು ಮಿಲಿಯನ್ ನಾಗರಿಕರನ್ನು ಸ್ಥಳಾಂತರಿಸಲು ಸಾಧ್ಯವೇ?
ಯುದ್ಧವು ನಿಯಂತ್ರಣ ಮೀರಿ ಉಲ್ಬಣಗೊಂಡರೆ, ಹೆಚ್ಚಿನ ಗಲ್ಫ್ ರಾಷ್ಟ್ರಗಳಲ್ಲಿ ಅತಿದೊಡ್ಡ ವಲಸಿಗ ಸಮುದಾಯವನ್ನು ಸ್ಥಳಾಂತರಿಸುವ ದೊಡ್ಡ ಸವಾಲನ್ನು ಭಾರತ ಎದುರಿಸಬೇಕಾಗುತ್ತದೆ. ಸಾವಿರಾರು ಪಾಶ್ಚಿಮಾತ್ಯ ವಲಸಿಗರು ಈಗಾಗಲೇ ತಮ್ಮ ದೇಶಗಳಿಂದ ಸ್ಥಳಾಂತರಿಸಲ್ಪಟ್ಟಿದ್ದಾರೆ. ಆದರೆ ಅಲ್ಲಿರುವ ಭಾರತೀಯ ಜನಸಂಖ್ಯೆಯ ಸಂಪೂರ್ಣವಾಗಿ ಸ್ಥಳಾಂತರಿಸುವುದು ಅಸಾಧ್ಯ. ಸುಮಾರು 35 ಮಿಲಿಯನ್ ವಲಸಿಗರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವು ತೈಲ ಸಂಪತ್ತಿನ ಜೊತೆಗೆ ಪ್ರಮುಖ ಆರ್ಥಿಕ ಮತ್ತು ವಾಯುಯಾನ ಕೇಂದ್ರವಾಗಿ ಹೊರಹೊಮ್ಮಿವೆ. ಅವರಲ್ಲಿ, 9.1 ಮಿಲಿಯನ್ ಜನರು ಭಾರತದಿಂದ ಬಂದವರು. 4.9 ಮಿಲಿಯನ್ ಪಾಕಿಸ್ತಾನಿಗಳೂ ಇಲ್ಲಿದ್ದಾರೆ.
ಯುದ್ಧದ ಪರಿಸ್ಥಿತಿಯಲ್ಲಿ, ಭಾರತ ಸೇರಿದಂತೆ ಯಾವುದೇ ದೇಶವು ಒಂಬತ್ತು ಅಥವಾ 10 ಮಿಲಿಯನ್ ಜನರನ್ನು ಸ್ಥಳಾಂತರಿಸಲು ಯಾವುದೇ ಮಾರ್ಗವಿಲ್ಲ ಎಂದು ಮಾಜಿ ಭಾರತೀಯ ರಾಯಭಾರಿ ಅಹ್ಮದ್ ಹೇಳಿದ್ದಾರೆ.
ಒಳ್ಳೆಯ ಕಾಲದಲ್ಲಿ ನಾವು ನಮ್ಮ ಗಲ್ಫ್ ಸಹೋದರರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ದುರಿತ ಕಾಲದಲ್ಲಿ ನಾವು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಅವರು ಈ ಪ್ರದೇಶದ ಭಾರತೀಯರಿಗೆ ಸಂದೇಶ ನೀಡಿದ್ದಾರೆ.
ಆದಾಗ್ಯೂ, 1991 ರ ಕೊಲ್ಲಿ ಯುದ್ಧ ಸೇರಿದಂತೆ ಹಿಂದಿನ ಸಂಘರ್ಷಗಳಲ್ಲಿ ಭಾರತವು ತನ್ನ ಪ್ರಜೆಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿದೆ ಎಂದಿದ್ದಾರೆ ಅಹ್ಮದ್. ಆಗ ಅವರು ಜಿದ್ದಾದಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿದ್ದರು. 1990 ರಲ್ಲಿ ಇರಾಕ್ ಗಲ್ಫ್ ರಾಷ್ಟ್ರವನ್ನು ಆಕ್ರಮಿಸಿದಾಗ ಸುಮಾರು 200,000 ಭಾರತೀಯ ಪ್ರಜೆಗಳನ್ನು ಕುವೈತ್‌ನಿಂದ ಸ್ಥಳಾಂತರಿಸಲಾಯಿತು.
2003 ರ ಇರಾಕ್ ಮೇಲೆ ಅಮೆರಿಕದ ಆಕ್ರಮಣದ ನಂತರ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಗೆ ತುರ್ತು ಯೋಜನೆಗಳನ್ನು ರೂಪಿಸಿತು ಎಂಬುದನ್ನು ಅಹ್ಮದ್ ನೆನಪಿಸಿಕೊಂಡರು. ಆ ಸಮಯದಲ್ಲಿ ಅವರು ರಿಯಾದ್‌ಗೆ ರಾಯಭಾರಿಯಾಗಿದ್ದರು. ಸದ್ದು ಗದ್ದಲವಿಲ್ಲದೆ ಬಸ್‌ಗಳು, ಟೆಂಟ್‌ಗಳು, ಕಂಬಳಿಗಳು ಮತ್ತು ಅಡುಗೆ ವ್ಯವಸ್ಥೆಗಳು ಹೀಗೆ ನಾವು ಎಲ್ಲವನ್ನೂ ವ್ಯವಸ್ಥೆಗೊಳಿಸಿದ್ದೆವು. ಗಡಿ ದಾಟಿದರೆ ಹಲವಾರು ಸಾವಿರ ಜನರನ್ನು ಕರೆದೊಯ್ಯಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೆವು ಎಂದಿದ್ದಾರೆ ಅಹ್ಮದ್.
ಭಾರತದ ವಿದೇಶಾಂಗ ಸಚಿವಾಲಯವು ಪರಿಸ್ಥಿತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರತಿಕ್ರಿಯಿಸಲು ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಅಗತ್ಯವಿರುವ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ದಿನದ 24 ಗಂಟೆಗಳ ಕಾಲ ಸಹಾಯವಾಣಿಗಳನ್ನು ಸ್ಥಾಪಿಸಿವೆ. ವಾಣಿಜ್ಯ ವಿಮಾನಗಳು ಮತ್ತು ನಿಗದಿತವಲ್ಲದ ವಿಮಾನಗಳ ಮೂಲಕ ಸಿಲುಕಿರುವ ಭಾರತೀಯ ಪ್ರಯಾಣಿಕರನ್ನು ಹಿಂದಿರುಗಿಸಲು ಭಾರತೀಯ ರಾಯಭಾರ ಕಚೇರಿಗಳು ಸಹ ಅವಕಾಶ ಮಾಡಿಕೊಟ್ಟಿವೆ.
►ಭಾರತದ ಹಿತಾಸಕ್ತಿಗಳೇನು?
ಯುದ್ಧದಲ್ಲಿ ಏನೇ ನಡೆದರೂ, ಭಾರತಕ್ಕೆ ಮಧ್ಯಪ್ರಾಚ್ಯದಿಂದ ಇನ್ನೂ ಸಾಕಷ್ಟು ತೈಲ ಬೇಕಾಗುತ್ತದೆ. ಆದಾಗ್ಯೂ, ಯುದ್ಧ ಮುಂದುವರಿದರೆ, ಭಾರತವು ತನ್ನ ತೈಲವನ್ನು ಇತರ ದೇಶಗಳಿಂದ ಖರೀದಿಸಲು ಪ್ರಾರಂಭಿಸಬೇಕಾಗಬಹುದು. ರಷ್ಯಾದ ತೈಲವು ಖಂಡಿತವಾಗಿಯೂ ಒಂದು ಆಯ್ಕೆಯಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಇಂಧನ ವಿಷಯದಲ್ಲಿ ಅಮೆರಿಕ ಜೊತೆ ಒಪ್ಪಂದವೂ ಇದೆ. ಕಳೆದ ದಶಕದಲ್ಲಿ ಭಾರತ ಯುಎಸ್‌ನಿಂದ ಇಂಧನವನ್ನು ಖರೀದಿಸುತ್ತಿದೆ. ಯುಎಸ್ ಪಾತ್ರ ಬೆಳೆದಿದೆ ಎಂದಿದ್ದಾರೆ ಪಂತ್.
►ವಿಪಕ್ಷ ಟೀಕೆ
ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಮೋದಿ ಸರ್ಕಾರವನ್ನು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷ ಟೀಕಿಸಿದೆ. ಭಾರತವು ಖಾಮಿನೈ ಅವರ ಹತ್ಯೆಯ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ವಿದೇಶಾಂಗ ಕಾರ್ಯದರ್ಶಿ ಹೊಸದಿಲ್ಲಿಯಲ್ಲಿರುವ ಇರಾನಿನ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ಏತನ್ಮಧ್ಯೆ, ಭಾರತವು ನಿಕಟ ಆರ್ಥಿಕ ಸಂಬಂಧ ಹೊಂದಿರುವ ಗಲ್ಫ್ ರಾಷ್ಟ್ರಗಳ ಮೇಲಿನ ಇರಾನಿನ ದಾಳಿಯನ್ನು ಖಂಡಿಸಿದೆ.
ಸಾರ್ವಭೌಮ ದೇಶದ ಮುಖ್ಯಸ್ಥರೊಬ್ಬರ ಹತ್ಯೆಯು ಸಮಕಾಲೀನ ಅಂತರರಾಷ್ಟ್ರೀಯ ಸಂಬಂಧಗಳಲ್ಲಿನ ಗಂಭೀರ ಬಿರುಕನ್ನು ಸೂಚಿಸುತ್ತದೆ. ಈ ಹತ್ಯೆಯನ್ನು ಭಾರತ ಖಂಡಿಸಿಲ್ಲ. ಈ ಸಂದರ್ಭದಲ್ಲಿ ಮೌನ ತಟಸ್ಥವಲ್ಲ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರಿಕಾ ಅಂಕಣದಲ್ಲಿ ಬರೆದಿದ್ದಾರೆ.
ಭಾರತ ಆಯೋಜಿಸಿದ್ದ ಮಿಲಿಟರಿ ಅಭ್ಯಾಸದಲ್ಲಿ ಭಾಗವಹಿಸಿ ಮರಳುತ್ತಿದ್ದಾಗ ಇರಾನ್ ಯುದ್ಧನೌಕೆಯನ್ನು ಯುಎಸ್ ಜಲಾಂತರ್ಗಾಮಿ ನೌಕೆ ಮುಳುಗಿದ್ದನ್ನು ಖಂಡಿಸದಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಟೀಕೆಗಳನ್ನು ಎದುರಿಸಿದೆ. ಹಡಗು ಶ್ರೀಲಂಕಾದ ಕರಾವಳಿಯಲ್ಲಿದ್ದಾಗ ಈ ದಾಳಿ ನಡೆದಿದೆ. ತರುವಾಯ ಭಾರತವು ಆಯೋಜಿಸಿದ್ದ ಅಭ್ಯಾಸದಲ್ಲಿದ್ದ ಎರಡನೇ ಇರಾನಿನ ಯುದ್ಧನೌಕೆಗೆ ಆಶ್ರಯ ನೀಡಿದೆ. ಗುರುವಾರ, ಮೋದಿ ಇರಾನಿನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿದ್ದಾರೆ. ಯುದ್ಧ ಪ್ರಾರಂಭವಾದ ನಂತರದ ಇದು ಅವರ ಮೊದಲ ಸಂಭಾಷಣೆಯಾಗಿದೆ.
ಆದರೂ, ವಿರೋಧ ಪಕ್ಷಗಳು ಮತ್ತು ಮೋದಿಯನ್ನು ಟೀಕಿಸುವವರು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಗೆ ಕೆಲವು ದಿನಗಳ ಮೊದಲು ಪ್ರಧಾನಿ ಇಸ್ರೇಲ್‌ಗೆ ಭೇಟಿ ನೀಡಿದ ಸಮಯವನ್ನು ಪ್ರಶ್ನಿಸಿದ್ದಾರೆ. ಭಾರತವು ಇಸ್ರೇಲ್ ಶಸ್ತ್ರಾಸ್ತ್ರಗಳ ಅತಿದೊಡ್ಡ ಖರೀದಿದಾರ. ಗಾಜಾದಲ್ಲಿ ನಡೆದ ಯುದ್ಧ ಅಪರಾಧಗಳ ಆರೋಪದ ಮೇಲೆ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (ICC) ಬಂಧನ ವಾರಂಟ್ ಎದುರಿಸುತ್ತಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಮೋದಿಯ ಇಸ್ರೇಲ್ ಪ್ರವಾಸವು ನ್ಯಾಯಸಮ್ಮತತೆಯನ್ನು ನೀಡಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
"ಅತ್ಯಂತ ಭ್ರಷ್ಟ ಇಸ್ರೇಲ್ ನಾಯಕ ನೆತನ್ಯಾಹು ಅವರ ರಾಜಕೀಯ ಉಳಿವು ಎರಡು ವಿಷಯಗಳ ಮೇಲೆ ಅವಲಂಬಿತವಾಗಿದೆ. ಒಂದು ಮಧ್ಯಪ್ರಾಚ್ಯದಲ್ಲಿ ಯುದ್ಧದ ಮುಂದುವರಿಕೆ ಮತ್ತು ಎರಡನೆಯದ್ದು ವಿದೇಶಿ ನಾಯಕರಿಂದ ನ್ಯಾಯಸಮ್ಮತತೆಯ ಮುದ್ರೆ. ಈ ಸಂದರ್ಭದಲ್ಲಿ, ಟ್ರಂಪ್ ಮೊದಲನೆಯದನ್ನು ಮತ್ತು ಮೋದಿ ಎರಡನೆಯದನ್ನು ನೀಡಿದರು ಎಂದು Indira Gandhi and the Years that Transformed India ಎಂಬ ಪುಸ್ತಕದ ಲೇಖಕ ಶ್ರೀನಾಥ್ ರಾಘವನ್ ಅಂಕಣವೊಂದರಲ್ಲಿ ಬರೆದಿದ್ದಾರೆ.
ಆದಾಗ್ಯೂ, ಪಂತ್ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ನಿಲುವನ್ನು ಬೆಂಬಲಿಸಿದರು.
ಭಾರತವು ಇತ್ತೀಚೆಗೆ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳೊಂದಿಗೆ ಎಷ್ಟು ಬಲವಾದ ಸಂಬಂಧವನ್ನು ನಿರ್ಮಿಸಿದೆಯೆಂದರೆ, ಇರಾನ್‌ನೊಂದಿಗಿನ ಅದರ ಸಂಬಂಧವನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ಭಾರತವು ನೆಲದ ವಾಸ್ತವಗಳಿಗೆ ಪ್ರತಿಕ್ರಿಯಿಸುತ್ತಿದೆ. ಭಾರತದ ಹಿತಾಸಕ್ತಿಗಳು ಇರಾನ್‌ಗಿಂತ ಅರಬ್ ಜಗತ್ತು ಮತ್ತು ಇಸ್ರೇಲ್‌ನೊಂದಿಗಿನ ಸಂಬಂಧದಿಂದ ಪ್ರಾಬಲ್ಯ ಹೊಂದಿವೆ ಎಂದು ʼಅಲ್ ಜಝೀರಾʼ ಜತೆ ಮಾತನಾಡಿದ ಪಂತ್ ಹೇಳಿದ್ದಾರೆ.

