ಬೈರೂತ್: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆ, ಶನಿವಾರ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಮೂವರು ಪತ್ರಕರ್ತರು ಹಾಗೂ 9 ಪ್ಯಾರಾಮೆಡಿಕಲ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಜೆಜ್ಜೈನ್ ರಸ್ತೆಯಲ್ಲಿ ಸ್ಪಷ್ಟವಾಗಿ ಗುರುತಿಸಲಾದ ಪತ್ರಿಕಾ ವಾಹನದ ಮೇಲೆ ನಡೆದ ದಾಳಿಯಲ್ಲಿ ಅಲ್-ಮಯಾದೀನ್ ಮಾಧ್ಯಮ ಸಂಸ್ಥೆಯ ಫಾತಿಮಾ ಫ್ಟೌನಿ, ಅವರ ಸಹೋದರ ಹಾಗೂ ಸಹೋದ್ಯೋಗಿ ಮೊಹಮ್ಮದ್ ಮತ್ತು ವರದಿಗಾರ ಅಲಿ ಶುಐಬ್ ಮೃತಪಟ್ಟಿದ್ದಾರೆ.
ವಾಹನದ ಮೇಲೆ ನಾಲ್ಕು ನಿಖರ ಕ್ಷಿಪಣಿಗಳನ್ನು ಹೊಡೆದಿರುವುದಾಗಿ ಅಲ್-ಮಯಾದೀನ್ ತಿಳಿಸಿದೆ.
ಈ ದಾಳಿಯಲ್ಲಿ ಇತರ ಪತ್ರಕರ್ತರು ಗಾಯಗೊಂಡಿದ್ದಾರೆ. ಅಲ್ಲದೆ, ಆಂಬ್ಯುಲೆನ್ಸ್ ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಒಬ್ಬ ಅರೆವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪತ್ರಕರ್ತರ ಸಾವಿಗೆ ಕಾರಣವಾದ ದಾಳಿಯನ್ನು ಇಸ್ರೇಲಿ ಸೇನೆ ಒಪ್ಪಿಕೊಂಡಿದ್ದು, ಅಲಿ ಶುಐಬ್ ಹಿಜ್ಬುಲ್ಲಾ ಗುಪ್ತಚರ ಘಟಕದೊಳಗೆ ಕಾರ್ಯನಿರ್ವಹಿಸುತ್ತಿದ್ದರು ಹಾಗೂ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲಿ ಪಡೆಗಳ ಚಲನವಲನಗಳನ್ನು ಪತ್ತೆಹಚ್ಚುತ್ತಿದ್ದರು ಎಂದು ಆರೋಪಿಸಿದೆ. ಜೊತೆಗೆ ಅವರು ಹಿಜ್ಬುಲ್ಲಾ ಪರ ಪ್ರಚಾರ ನಡೆಸುತ್ತಿದ್ದರು ಎಂದು ಹೇಳಿದೆ.
ಆದರೆ, ಅಲ್-ಮಯಾದೀನ್ ಹಾಗೂ ಅಲ್-ಮನಾರ್ ಮಾಧ್ಯಮ ಸಂಸ್ಥೆಗಳು ಈ ಆರೋಪಗಳನ್ನು ತಳ್ಳಿ ಹಾಕಿವೆ. ಅಲಿ ಶುಐಬ್ ಲೆಬನಾನ್ ಮೇಲಿನ ಇಸ್ರೇಲ್ ದಾಳಿಗಳನ್ನು ದಶಕಗಳಿಂದ ವರದಿ ಮಾಡುತ್ತಿದ್ದ ಪ್ರಮುಖ ಯುದ್ಧ ವರದಿಗಾರರಲ್ಲಿ ಒಬ್ಬರಾಗಿದ್ದರು ಎಂದು ಸಂಸ್ಥೆಗಳು ತಿಳಿಸಿವೆ.
ಗಾಝಾದಲ್ಲಿ ಈಗಾಗಲೇ 270ಕ್ಕೂ ಹೆಚ್ಚು ಪತ್ರಕರ್ತರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಗುರಿಯಾಗಿಸಿದ ವರದಿಗಾರರು ಸಶಸ್ತ್ರ ಗುಂಪುಗಳ ಸದಸ್ಯರು ಅಥವಾ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಸಾಕ್ಷ್ಯಾಧಾರಗಳಿಲ್ಲದೆ ಆಗಾಗ್ಗೆ ಆರೋಪಿಸುತ್ತಿರುವುದಾಗಿ ಟೀಕೆಗಳು ವ್ಯಕ್ತವಾಗಿವೆ. ಇಸ್ರೇಲ್ ನ ಆರೋಪಗಳನ್ನು ಎರಡೂ ನೆಟ್ ಮಾಧ್ಯಮ ಸಂಸ್ಥೆಗಳು ಒಪ್ಪಿಲ್ಲ.
ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿ, ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದು ಅಂತರರಾಷ್ಟ್ರೀಯ ಕಾನೂನಿನ ಅತ್ಯಂತ ಮೂಲಭೂತ ನಿಯಮಗಳ ಉಲ್ಲಂಘನೆ ಎಂದು ಹೇಳಿದ್ದಾರೆ. "ಸಶಸ್ತ್ರ ಸಂಘರ್ಷಗಳ ಸಮಯದಲ್ಲಿ ಪತ್ರಕರ್ತರಿಗೆ ಅಂತರರಾಷ್ಟ್ರೀಯ ರಕ್ಷಣೆ ನೀಡುವ ಎಲ್ಲಾ ನಿಯಮಗಳು ಮತ್ತು ಒಪ್ಪಂದಗಳನ್ನು ಉಲ್ಲಂಘಿಸುವ ಸ್ಪಷ್ಟ ಅಪರಾಧ ಇದು" ಎಂದು ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನವಾಫ್ ಸಲಾಮ್ ಕೂಡ ಈ ದಾಳಿಯನ್ನು ಖಂಡಿಸಿ, "ಇದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ" ಎಂದು ಹೇಳಿದ್ದಾರೆ.
ದಕ್ಷಿಣ ಲೆಬನಾನ್ ನ ತೈರ್ ನಗರದಿಂದ ವರದಿ ಮಾಡಿರುವ Aljazeera ವರದಿಗಾರ ಒಬೈದಾ ಹಿಟ್ಟೊ, "ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಸ್ಪಷ್ಟ ಅಪಾಯಗಳ ನಡುವೆಯೂ ಅವರು ತಮ್ಮ ಕರ್ತವ್ಯವನ್ನು ಮುಂದುವರಿಸಲಿದ್ದಾರೆ" ಎಂದು ತಿಳಿಸಿದ್ದಾರೆ.
ಒಂದೇ ದಿನದಲ್ಲಿ ಒಂಭತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ಮೃತ್ಯು:
ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಪ್ಯಾರಾಮೆಡಿಕಲ್ ಸಿಬ್ಬಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಝೌತರ್ ಅಲ್-ಶಾರ್ಕಿಯಾದಲ್ಲಿ ನಡೆದ ದಾಳಿಯಲ್ಲಿ ಐವರು ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಕ್ಫರ್ ಟಿಬ್ನಿಟ್ ನಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆ. ಘಂಡೌರಿಯೆಹ್ ಆರೋಗ್ಯ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಪ್ಯಾರಾಮೆಡಿಕಲ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಜೆಜ್ಜೈನ್‌ನಲ್ಲಿ ನಡೆದ ದಾಳಿಯಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಕ್ಫರ್ ದಜ್ಜಲ್ ಮೇಲಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಪದೇಪದೇ ನಡೆದ ದಾಳಿಗಳ ಪರಿಣಾಮ ದಕ್ಷಿಣ ಲೆಬನಾನ್ ನ ಆರೋಗ್ಯ ಸೇವೆಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. ನಾಲ್ಕು ಆಸ್ಪತ್ರೆಗಳು ಹಾಗೂ 51 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮುಚ್ಚಲ್ಪಟ್ಟಿದ್ದು, ಇನ್ನೂ ಹಲವಾರು ಆರೋಗ್ಯ ಸೌಲಭ್ಯಗಳು ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು WHO ಮುಖ್ಯಸ್ಥರು ತಿಳಿಸಿದ್ದಾರೆ.

