ಕೀವ್/ ಮಾಸ್ಕೊ: ರಷ್ಯಾ ಮತ್ತು ಉಕ್ರೇನ್ ನಡುವಿನ ಡ್ರೋನ್ ದಾಳಿ ಶನಿವಾರವೂ ಮುಂದುವರಿದಿದೆ..
ಉಕ್ರೇನ್‌ನ ಝಪೋರಿಝಿಯಾ ನಗರದ ಮೇಲೆ ರಷ್ಯಾ ಶನಿವಾರ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮನೆಯೊಂದರ ಮೇಲೆ ರಷ್ಯಾ ಡ್ರೋನ್ ಅಪ್ಪಳಿಸಿದ್ದು, ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದಾರೆ.
ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಝಪೋರಿಝಿಯಾ ಪ್ರದೇಶ ಮುಖ್ಯಸ್ಥ ಐವನ್ ಫೆಡೋರೊವ್ ಅವರು ತಿಳಿಸಿದ್ದಾರೆ.
ರಷ್ಯಾದ ಮೇಲೆ ಉಕ್ರೇನ್ 280ಕ್ಕೂ ಅಧಿಕ ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ.
ಉಭಯ ದೇಶಗಳ ನಡುವೆ ಯುದ್ಧ ಆರಂಭಗೊಂಡ ಬಳಿಕ ಉಕ್ರೇನ್ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು ರಕ್ಷಣಾ ಸಚಿವಾಲಯ ಮಾಹಿತಿ ಆಧರಿಸಿ ವರದಿ ಮಾಡಿದೆ.
ರಷ್ಯಾದ ಸರಟೋವ್‌ನಲ್ಲಿರುವ ತೈಲ ಸಂಸ್ಕರಣಾ ಘಟಕವೊಂದರ ಮೇಲೆ ದಾಳಿ ಮಾಡಿ, ಹಾನಿಗೊಳಿಸಲಾಗಿದೆ ಎಂದು ಉಕ್ರೇನ್ ಸೇನೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸರಟೋವ್ ಪ್ರದೇಶದಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಹಲವಾರು ಮನೆಗಳು ಧ್ವಂಸಗೊಂಡಿವೆ.
ದಕ್ಷಿಣ ರೋಸ್ಟೊವ್ ಪ್ರದೇಶದಲ್ಲಿ 90 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಲ್ಲಿನ ಗವರ್ನರ್ ತಿಳಿಸಿದ್ದಾರೆ.
ರಾಜಧಾನಿ ಮಾಸ್ಕೊ ಕಡೆಗೆ ಬರುತ್ತಿದ್ದ 27 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಲ್ಲಿನ ಮೇಯರ್ ತಿಳಿಸಿದ್ದಾರೆ.

