ದುಬೈ/ಜೆರುಸಲೇಂ: ಈದ್ ಉಲ್ ಫಿತ್ರ್ ಹಬ್ಬದ ದಿನವಾದ ಶನಿವಾರ ಜೆರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲಿನ ಅಲ್- ಅಕ್ಸಾ ಮಸೀದಿಗೆ ಕೇವಲ ನೂರು ಮೀಟರ್ ಅಂತರದಲ್ಲಿ ಈ ದಾಳಿ ನಡೆದಿದೆ.
ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೋದಿಗಳ ಪವಿತ್ರ ಸ್ಥಳಗಳಿಂದ ಕೆಲವೇ ಮೀಟರ್ ದೂರದಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಇಸ್ರೇಲ್ ಶನಿವಾರ ಹೇಳಿದೆ.
ಇರಾಕ್ ಗುಪ್ತಚರ ಅಧಿಕಾರಿ ಹತ
ಇರಾಕ್ ರಾಜಧಾನಿ ಬಾಗ್ದಾದ್‌ನ ಗುಪ್ತಚರ ಸೇವೆಗಳ ಕಟ್ಟಡವನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯಲ್ಲಿ ಇರಾಕ್‌ನ ಗುಪ್ತಚರ ಅಧಿಕಾರಿಯೊಬ್ಬರು ಹತರಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಇನ್ನೊಂದು ಡ್ರೋನ್ ಇಲ್ಲಿನ ಪ್ರಸಿದ್ಧ ಖಾಸಗಿ ಕ್ರೀಡಾ ಕ್ಲಬ್‌ಗೆ ಅಪ್ಪಳಿಸಿದೆ. ಆದರೆ ಈ ದಾಳಿಗಳ ಜವಾಬ್ದಾರಿಯನ್ನು ಯಾವುದೇ ಗುಂಪು ಅಥವಾ ದೇಶ ವಹಿಸಿಕೊಂಡಿಲ್ಲ.
ಬೈರೂತ್ ದಕ್ಷಿಣ ಉಪ ನಗರಗಳಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ದಾಳಿ ನಡೆಸಿದ್ದು, ಭಾರಿ ಸ್ಪೋಟ, ಬೆಂಕಿ, ಹೊಗೆ ಕಾಣಿಸಿಕೊಂಡಿದೆ.
'ಪ್ರವಾಸಿ ತಾಣಗಳನ್ನು ಗುರಿಯಾಗಿಸುತ್ತೇವೆ'
'ವಿಶ್ವಾದಾದ್ಯಂತ ಇರುವ ಪ್ರಮುಖ ಉದ್ಯಾನಗಳು, ಮನರಂಜನಾ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸುತ್ತೇವೆ. ಅಲ್ಲಿ ದೇಶದ ಶತ್ರುಗಳು ಸುರಕ್ಷಿತವಾಗಿರಲು ಬಿಡುವುದಿಲ್ಲ' ಎಂದು ಇರಾನ್ ಸೇನೆಯ ಹಿರಿಯ ವಕ್ತಾರ ಜನರಲ್ ಅಬೋಲ್‌ಫಾಜ್ಲ್ ಶೇಕಾರ್ಚ್ ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಏಷ್ಯಾದ ಆಚೆಗೆ ಭಯೋತ್ಪಾದಕ ದಾಳಿ ನಡೆಸುವ ಮೂಲಕ ಒತ್ತಡ ತಂತ್ರವನ್ನು ಇರಾನ್ ಬಳಸಬಹುದು ಎಂಬ ಕಳವಳ ಇದರಿಂದ ವ್ಯಕ್ತವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಗುರಿ ತಲುಪುವ ಹಂತದಲ್ಲಿದ್ದೇವೆ- ಟ್ರಂಪ್
'ನಾವು ನಮ್ಮ ಗುರಿಗಳನ್ನು ತಲುಪುವ ಹಂತದಲ್ಲಿದ್ದೇವೆ. ಹೀಗಾಗಿ ಇರಾನ್ ಮೇಲಿನ ಸೇನಾ ಕಾರ್ಯಾಚರಣೆ ಕೊನೆಗೊಳಿಸುವ ಕುರಿತು ಪರಿಶೀಲಿಸುತ್ತಿದ್ದೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಇರಾನ್‌ಗೆ ಭೂಸೇನೆಯನ್ನು ಕಳುಹಿಸುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದಿರುವ ಟ್ರಂಪ್, 'ಎಲ್ಲ ಆಯ್ಕೆಗಳು ನಮ್ಮ ಮುಂದಿವೆ' ಎಂದೂ ಪ್ರತಿಪಾದಿಸಿದ್ದಾರೆ.
ಇನ್ನೊಂದೆಡೆ, ಇದಕ್ಕೆ ವ್ಯತಿರಿಕ್ತ ಎಂಬಂತೆ ಅಮೆರಿಕವು ಭೂಮಿ ಮತ್ತು ಜಲದಲ್ಲಿ ಚಲಿಸಬಹುದಾದ ಮೂರು ಹಡಗುಗಳನ್ನು ಮತ್ತು 2,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪಶ್ಚಿಮ ಏಷ್ಯಾಕ್ಕೆ ನಿಯೋಜಿಸುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

