HEALTH TIPS

ಮಮತಾ ಬ್ಯಾನರ್ಜಿ ಸರ್ಕಾರದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ: ಪ್ರಧಾನಿ ಮೋದಿ

ಕೋಲ್ಕತ್ತ (PTI): ಪಶ್ಚಿಮ ಬಂಗಾಳದಲ್ಲಿನ ಆಡಳಿತಾರೂಢ ಟಿಎಂಸಿ ಪಕ್ಷವು ನುಸುಳುಕೋರರ ತಮ್ಮ 'ಮತಬ್ಯಾಂಕ್‌' ರಕ್ಷಿಸಲು ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯನ್ನು (ಎಸ್‌ಐಆರ್‌) ವಿರೋಧಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಮಮತಾ ಬ್ಯಾನರ್ಜಿ ಸರ್ಕಾರದ ಅಂತ್ಯಕ್ಕೆ ದಿನಗಣನೆ ಆರಂಭವಾಗಿದೆ' ಎಂದರು.

ಅಕ್ರಮ ವಲಸಿಗರಿಂದ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಜನಸಂಖ್ಯಾ ಚಿತ್ರಣವೇ ಬದಲಾಗಿದೆ ಎಂದು ಅವರು ದೂರಿದರು.

ಇಲ್ಲಿನ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಶನಿವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಟಿಎಂಸಿ ನೇತೃತ್ವದ ಸರ್ಕಾರದ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

'ಟಿಎಂಸಿ ಸರ್ಕಾರವು ಬಂಗಾಳದಲ್ಲಿ ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರನ್ನಾಗಿ ಮಾಡುತ್ತಿದೆ. ಕಿರುಕುಳಕ್ಕೆ ಒಳಗಾದ ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡಲು ವಿರೋಧಿಸುತ್ತಿದೆ' ಎಂದು ಮೋದಿ ಆರೋಪಿಸಿದರು.

ಎಸ್‌ಐಆರ್‌ ಪ್ರಕ್ರಿಯೆಯು ಅಕ್ರಮ ಮತದಾರರ ಹೆಸರುಗಳನ್ನು ಅಳಿಸುತ್ತದೆ ಮತ್ತು ಮತದಾರರ ಪಟ್ಟಿಯನ್ನು ಶುದ್ಧೀಕರಿಸುತ್ತದೆ. ಆದರೆ, ಅದು ಆಗುವುದು ಟಿಎಂಸಿಗೆ ಬೇಕಿಲ್ಲ. ಅಲ್ಲದೆ ಅವರಿಗೆ, ಮೃತರ ಹೆಸರುಗಳನ್ನು ಅಳಿಸುವುದೂ ಬೇಕಿಲ್ಲ ಎಂದು ದೂರಿದರು.

ಎಸ್‌ಐಆರ್‌ ವಿಚಾರದಲ್ಲಿ ಟಿಎಂಸಿ ಚುನಾವಣಾ ಆಯೋಗ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ಆಡಳಿತ ಪಕ್ಷವು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದರು.

ಟಿಎಂಸಿ ಸರ್ಕಾರಕ್ಕೆ ಅಪರಾಧಿಗಳ ಬೆಂಬಲ:

'ಟಿಎಂಸಿ ಆಡಳಿತವು ಗೂಂಡಾಗಳು ಮತ್ತು ಅಪರಾಧಿಗಳ ಬೆಂಬಲದ ಮೇಲೆ ನಡೆಯುತ್ತಿದೆ. ಸುಲಿಗೆ, ಹಣ ಕಡಿತ ಮಾಡುವುದು ಈ ಸರ್ಕಾರದ ಆದಾಯದ ಮೂಲಗಳಾಗಿವೆ. ಇಂತಹ ಗ್ಯಾಂಗ್‌ಗಳನ್ನು ಬಲಪಡಿಸುವುದಕ್ಕೆ ನುಸುಳುಕೋರರನ್ನು ಕರೆತರಲಾಗುತ್ತಿದೆ. ಇವರಿಂದ ಬಂಗಾಳದ ಜನರ ಅನ್ನ, ಹೆಣ್ಣು ಮಕ್ಕಳು ಮತ್ತು ಜಮೀನಿಗೆ ಬೆದರಿಕೆಯಿದೆ' ಎಂದು ಪ್ರಧಾನಿ ಆರೋಪ ಮಾಡಿದರು.

'ಟಿಎಂಸಿಯ ಈ ಗೂಂಡಾಗಿರಿ ದಿನಗಳು ಕೊನೆಗೊಳ್ಳಲು ದಿನಗಣನೆ ಆರಂಭವಾಗಿದೆ ಎಂಬುದನ್ನು ಟಿಎಂಸಿಗೆ ಹೇಳಲು ಬಯಸುತ್ತೇನೆ' ಎಂದು ಮೋದಿ ಹೇಳಿದರು.

ರಾಜಕೀಯ ಬದಲಾವಣೆಗೆ ಒತ್ತಾಯ:

'ಟಿಎಂಸಿಗೆ ಮತ ಹಾಕದವರು ಬಂಗಾಳಿಗಳಲ್ಲ, ಅವರಿಗೆ ಸರ್ಕಾರಿ ಸವಲತ್ತು ಸಿಗುವುದಿಲ್ಲ ಎಂದು ಟಿಎಂಸಿ ನಾಯಕರು ರಾಜ್ಯದ ಜನರನ್ನು ಬೆದರಿಸುತ್ತಿದ್ದಾರೆ' ಎಂದ ಪ್ರಧಾನಿ, 'ರಾಜ್ಯದ ಭವಿಷ್ಯಕ್ಕಾಗಿ ನಡೆಯುವ ನಿರ್ಣಾಯಕ ಯುದ್ಧದಲ್ಲಿ (ವಿಧಾನಸಭಾ ಚುನಾವಣೆ) ರಾಜಕೀಯ ಬದಲಾವಣೆ ತನ್ನಿ' ಎಂದು ಜನರನ್ನು ಒತ್ತಾಯಿಸಿದರು.

ಬಂಗಾಳದ ಆತ್ಮ ರಕ್ಷಿಸುವ ಚುನಾವಣೆ:

ಮುಂಬರುವ ಚುನಾವಣೆಯು ಕೇವಲ ಸರ್ಕಾರವನ್ನು ಬದಲಿಸುವುದಷ್ಟೇ ಅಲ್ಲ, ಬಂಗಾಳದ ಆತ್ಮವನ್ನು ರಕ್ಷಿಸುವ ಚುನಾವಣೆ ಆಗಿದೆ. ಅಲ್ಲದೆ, ಭಯದಿಂದ ಸ್ವಾತಂತ್ರ್ಯದೆಡೆಗೆ ಸಾಗುವ ಚುನಾವಣೆಯಾಗಿದೆ ಎಂದು ಬಣ್ಣಿಸಿದರು.

ರಾಷ್ಟ್ರಪತಿ ಅವರು ಪಶ್ಚಿಮ ಬಂಗಾಳಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ವೇಳೆ ಉಂಟಾಗಿದ್ದ ಶಿಷ್ಟಾಚಾರ ಉಲ್ಲಂಘನೆ ಕುರಿತು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 'ಆಡಳಿತಾರೂಢ ಟಿಎಂಸಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸುವ ಮೂಲಕ ಎಲ್ಲಾ ಮಿತಿಗಳನ್ನು ದಾಟಿದೆ' ಎಂದು ಆರೋಪಿಸಿದರು. 'ಆದಿವಾಸಿ ಸಮುದಾಯದ ಮಗಳು ಅತ್ಯುನ್ನತ ಸ್ಥಾನ ಅಲಂಕರಿಸಿರುವುದು ಟಿಎಂಸಿಗೆ ಸಹಿಸಲು ಆಗುತ್ತಿಲ್ಲ' ಎಂದ ಅವರು 'ಸಂವಿಧಾನ ಮತ್ತು ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಟಿಎಂಸಿ ಮಾಡಿದ ಅಪಮಾನವನ್ನು ಪಶ್ಚಿಮ ಬಂಗಾಳದ ಜನರು ಸಹಿಸುವುದಿಲ್ಲ. ಅದಕ್ಕೆ ತಕ್ಕ ಪಾಠ ಕಲಿಸುತ್ತಾರೆ' ಎಂದರು. ಸಂತಾಲ್‌ ಬುಡಕಟ್ಟು ಉತ್ಸವದಲ್ಲಿ ಭಾಗವಹಿಸಲು ರಾಷ್ಟ್ರಪತಿಯವರು ರಾಜ್ಯಕ್ಕೆ ಬಂದಿದ್ದ ವೇಳೆ ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಪ್ರಧಾನಿ ದೂರಿದರು.ರಾಷ್ಟ್ರಪತಿಗೆ ಅವಮಾನ: ಮೋದಿ ಖಂಡನೆ

ಬಿಜೆಪಿ-ಟಿಎಂಸಿ ಕಾರ್ಯಕರ್ತರ ಘರ್ಷಣೆ

ಪ್ರಧಾನಿ ಅವರ ಸಭೆ ಆರಂಭಕ್ಕೂ ಅರ್ಧ ಗಂಟೆ ಮುನ್ನ ಕೋಲ್ಕತ್ತದ ಮಧ್ಯ ಭಾಗದಲ್ಲಿ ಬಿಜೆಪಿ ಮತ್ತು ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು ಪೊಲೀಸ್‌ ಅಧಿಕಾರಿ ಮತ್ತು ಬಿಜೆಪಿ ನಾಯಕರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ನಡುವೆಯೇ ಪಶ್ಚಿಮ ಬಂಗಾಳದ ಸಚಿವ ಶಶಿ ಪಂಜಾ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಬೆಂಬಲಿಗರು ಬ್ರಿಗೇಡ್‌ ಪರೇಡ್‌ ಮೈದಾನದತ್ತ ಮೆರವಣಿಗೆಯಲ್ಲಿ ಸಾಗುವಾಗ ಈ ಹಿಂಸಾಚಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಎರಡೂ ಪಕ್ಷಗಳ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿ ಘೋಷಣೆಗಳನ್ನು ಕೂಗಿದ್ದಾರೆ. ಇದರಿಂದ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ರ್‍ಯಾಲಿ ಸಾಗುವಾಗ ತಮ್ಮ ಬೆಂಬಲಿಗರ ಮೇಲೆ ದಾಳಿ ನಡೆಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. 'ಯಾವುದೇ ಪ್ರಚೋದನೆ ಇಲ್ಲದೆ ನಮ್ಮ ಮೇಲೆ ಕಲ್ಲುಗಳನ್ನು ಎಸೆದು ನಿಂದಿಸಲಾಗಿದೆ' ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘರ್ಷಣೆ ವೇಳೆ ಹಲವು ವಾಹನಗಳಿಗೆ ಹಾನಿಯಾಗಿದೆ. ರ್‍ಯಾಲಿಯಲ್ಲಿ ಸಾಗುತ್ತಿದ್ದ ಬಿಜೆಪಿ ಬೆಂಬಲಿಗರು ಸಚಿವರ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ್ದಾರೆ. ಸ್ಥಳಕ್ಕೆ ದೊಡ್ಡ ಪ್ರಮಾಣದಲ್ಲಿ ಬಂದ ಪೊಲಿಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪ್ರಧಾನಿಯಿಂದ ತಪ್ಪು ಸಂಕಥನ: ಟಿಎಂಸಿ

ಕೋಲ್ಕತ್ತ: 'ಪಶ್ಚಿಮ ಬಂಗಾಳದ ಬಗ್ಗೆ ತಪ್ಪು ಸಂಕಥನ ಸೃಷ್ಟಿಸುವ ಕಾರ್ಯದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಎಂಬುದಕ್ಕಿಂತ ಮಿಗಿಲಾಗಿ ಸುಳ್ಳು ಹೇಳುವ ಬಿಜೆಪಿಯ ನಾಯಕನಂತೆ ವರ್ತಿಸುತ್ತಿದ್ದಾರೆ' ಎಂದು ಟಿಎಂಸಿ ಶನಿವಾರ ದೂರಿದೆ. ನುಸುಳುಕೋರರು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳ ಬಗ್ಗೆ ಪದೇ ಪದೇ ಆಧಾರರಹಿತ ಹೇಳಿಕೆಗಳನ್ನು ಪ್ರಧಾನಿ ಉಲ್ಲೇಖಿಸುತ್ತಿದ್ದಾರೆ ಎಂದು ಸಚಿವ ಬ್ರಾತ್ಯಾ ಬಸು ಆರೋಪಿಸಿದರು.

'ಬಿಜೆಪಿಯು ಮತದಾರರ ಧ್ರುವೀಕರಣಕ್ಕೆ ಯತ್ನಿಸುತ್ತಿದೆ. ಚುನಾವಣಾ ಲಾಭಕ್ಕಾಗಿ ಸಮುದಾಯಗಳನ್ನು ಎತ್ತಿಕಟ್ಟುವ ವಿಭಜಕ ಕಾರ್ಯಸೂಚಿಯು ಪ್ರಧಾನಿ ಅವರ ಭಾಷಣದಲ್ಲಿ ಪ್ರತಿಬಂಬಿತವಾಗಿದೆ' ಎಂದು ಅವರು ದೂರಿದರು. ರಾಜ್ಯದ ಪ್ರಗತಿಪರ ಜನರು ಇಂತಹದ್ದರಿಂದ ಪ್ರಭಾವಿತರಾಗುವುದಿಲ್ಲ ಎಂದು ಅವರು ತಿಳಿಸಿದರು. ಬಂಗಾಳದ ಹಲವು ಯೋಜನೆಗಳಿಗೆ ನೀಡಬೇಕಾದ ಸುಮಾರು ₹ 2 ಲಕ್ಷ ಕೊಟಿ ತಡೆಹಿಡಿದಿರುವ ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ ಎಂದು ಟಿಎಂಸಿ ಸಂಸದೆ ಸಾಯೋನಿ ಘೋಷ್‌ ವ್ಯಂಗ್ಯವಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries