ಗುವಾಹಟಿ: ಉತ್ತಮ ಭವಿಷ್ಯಕ್ಕಾಗಿ ಎಲ್ಲವನ್ನೂ ಮರೆತುಬಿಡಿ ಮತ್ತು ಕ್ಷಮಿಸಿ ಎಂದು ಮಣಿಪುರ ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್ ಹೇಳಿದರು.
ಮೈತೇಯಿ ಮತ್ತು ಕುಕಿ ಸಮುದಾಯದ ನಡುವಣ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕುಕಿ ಜೋ ಕೌನ್ಸಿಲ್‌ನೊಂದಿಗೆ ಸಭೆ ನಡೆಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶಾಂತಿ ಸ್ಥಾಪಿಸುವ ಉದ್ದೇಶದಿಂದ ಎರಡು ಸಮುದಾಯಗಳ ಮಧ್ಯೆ ಸೇತುವೆಯಾಗಿ ಸರ್ಕಾರ ಕೆಲಸ ಮಾಡುತ್ತಿದೆ' ಎಂದು ಹೇಳಿದರು.
'36 ವಿವಿಧ ಸಮುದಾಯಗಳು ನೆಲೆಸಿದ್ದರೂ ರಾಜ್ಯವು ಅಖಂಡವಾಗಿದೆ. ಹೀಗಾಗಿ ಭವಿಷ್ಯಕ್ಕಾಗಿ ಈ ಹಿಂದಿನದ್ದನ್ನು ಮರೆತುಬಿಡೋಣ' ಎಂದು ಹೇಳಿದರು.
ಪ್ರತ್ಯೇಕ ಆಡಳಿತ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಮಣಿಪುರದ ಪ್ರಾದೇಶಿಕ ಸಮಗ್ರತೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮತ್ತೆ ಮಾತನಾಡುವ ಅಗತ್ಯವಿಲ್ಲ' ಎಂದು ಹೇಳಿದರು.

