ಮಂಜೇಶ್ವರ: ಆರ್.ಎಸ್.ಎಸ್. ಶತಾಬ್ದಿ ಹಿನ್ನೆಲೆಯಲ್ಲಿ ಮಂಜೇಶ್ವರ ಹಿಂದೂ ಸಂಗಮ ಆಯೋಜನಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಎಸ್.ಎ.ಟಿ. ಶಾಲಾ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಂಜೇಶ್ವರ ಹಿಂದೂ ಸಂಗಮದ ಅಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು ಅಧ್ಯಕ್ಷತೆ ವಹಿಸಿದ್ದರು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದೀಪ ಪ್ರಜ್ವಲನೆ ಗೈದು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಸಹನಾ ಕುಂದರ್ ಸೂಡ ದಿಕ್ಸೂಚಿ ಭಾಷಣ ಮಾಡಿದರು.
ಸಮಿತಿಯ ಗೌರವಾಧ್ಯಕ್ಷ, ನಿವೃತ್ತ ನೌಕಾದಳ ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ ಸದಾಶಯದ ಮಾತುಗಳನ್ನಾಡಿದರು. ರಕ್ಷಾಧಿಕಾರಿ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಬಡಾಜೆಬೂಡು, ಮಾತೃ ಶಕ್ತಿ ಸಂಚಾಲಕಿ ಶಶಿಕಲಾ ಮಾಡ ಉಪಸ್ಥಿತರಿದ್ದರು. ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಮುಂದಿಟ್ಟಿರುವ ಪಂಚ ಪರಿವರ್ತನೆಗಳ ಮಹತ್ವ ಹಾಗೂ ಹಿಂದೂ ಸಮಾಜಕ್ಕೆ ಎದುರಾಗಿರುವ ಸವಾಲುಗಳು-ಉತ್ತರಗಳನ್ನೊಳಗೊಂಡ ಕರಪತ್ರವನ್ನು ಸ್ವಾಮೀಜಿ ಅನಾವರಣಗೊಳಿಸಿದರು.
ಶತಕಂಠ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಮಾಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಮಹಾಬಲೇಶ್ವರ ವಂದಿಸಿದರು. ಈಶ್ವರ್ ಕಿದೂರು ಹಾಗೂ ಶೈಲೇಶ್ ಸ್ಫೂರ್ತಿನಗರ ನಿರೂಪಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಕಾರ್ಯಕ್ರಮ ವೇದಿಕೆಯಲ್ಲಿ ಜರಗಿತು. ಕುಣಿತ ಭಜನಾ ತಂಡಗಳ ಸಾಮೂಹಿಕ ಕುಣಿತ ಪ್ರದರ್ಶನ, ಹುಲಿ ವೇಷಧಾರಿಗಳ ನೃತ್ಯಪ್ರದರ್ಶನ, ಆದರ್ಶ ವ್ಯಕ್ತಿತ್ವಗಳ ಅಭಿನಯ ಪ್ರದರ್ಶನ ಹಾಗೂ ವೇದಪಟುಗಳಿಂದ ವೇದ ಮಂತ್ರಗಳ ಉದ್ಘೋಷಗಳು ಗಮನ ಸೆಳೆಯಿತು. ಇದಕ್ಕೂ ಮೊದಲು ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನ ವಠಾರದಿಂದ ಬೃಹತ್ ಶೋಭಾಯತ್ರೆಯಲ್ಲಿ ದೇವಸ್ಥಾನದ ಅಧ್ಯಕ್ಷ ಟಿ. ಗಣಪತಿ ಪೈ ಸಂಗಮ ಸಮಿತಿಯ ಅಧ್ಯಕ್ಷ ಮೋಹನ ಶೆಟ್ಟಿ ತೂಮಿನಾಡುರಿಗೆ ಭಗವಾದ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಸನಾತನ ಭಾರತೀಯ ಪರಂಪರೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಪ್ರತಿಬಿಂಬಿಸುವ ಚಂದ್ರಹಾಸ್ ಮುಗುಳ್ಯ ಸಾರಥ್ಯದ ದತ್ತಾಂಜನೇಯ ಕಲಾಬಳಗ ಕಣ್ವತೀರ್ಥದ ಕಲಾವಿದರಿಂದ ಭರತ ವೈಭವ ಮನಸೂರೆಗೊಂಡಿತು.

.jpg)
.jpg)
