ಕುಂಬಳೆ: ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರತಿ ಕುಟುಂಬಕ್ಕೆ ಮೂಲ ಸೌಕರ್ಯ ಮತ್ತು ಆರ್ಥಿಕ ಸೌಲಭ್ಯ ಒದಗಿಸುವ ಮೂಲಕ ಭಾರತದ ಕೋಟ್ಯಂತರ ಜನರ ಜೀವನ ಮಟ್ಟ ಸುಧಾರಿಸಲು ಕಾರಣವಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.
ಅವರುಮಹಿಳಾ ಮೋರ್ಚಾ ಕುಂಬಳೆ ಪಂಚಾಯಿತಿ ಸಮಿತಿ ಆಯೋಜಿಸಿದ್ದ ಮಹಿಳಾ ಸಂಗಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮುಖ್ಯ ಭಾಷಣ ಮಾಡಿ, ಕೇಂದ್ರ ಸರ್ಕಾರ ಕೇರಳಕ್ಕೆ ಸಹಾಯ ಮಾಡಲು ಸಿದ್ಧವಿದ್ದರೂ, ಪಿಣರಾಯಿ ವಿಜಯನ್ ಸರ್ಕಾರ ಅದನ್ನು ಬಳಸಿಕೊಳ್ಳುವಲ್ಲಿ ಮತ್ತು ಕೇಂದ್ರದ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿರುವುದಾಗಿ ತಿಳಿಸಿದರು. ಉಭಯ ರಂಗಗಳೂ ಕಾಸರಗೋಡನ್ನು ಅವಗಣಿಸಿದೆ. ಜಿಲ್ಲೆಯ ಜನತೆ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಅಗತ್ಯಗಳಿಗಾಗಿ ಕರ್ನಾಟಕವನ್ನು ಅವಲಂಬಿಸಬೇಕಾದ ಪರಿಸ್ಥಿತಿಯಿದೆ. ಭಾಷಾ ಅಲ್ಪಸಂಖ್ಯಾತರನ್ನು ಕಡೆಗಣಿಸಿರುವ ಸರ್ಕಾರ, ಭಾಷಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲೂ ವಿಫಲವಾಗಿರುವುದಾಗಿ ತಿಳಿಸಿದರು.
ಮಹಿಳಾ ಮೋರ್ಚಾ ಕುಂಬಳೆ ಪಂಚಾಯಿತಿ ಸಮಿತಿ ಅಧ್ಯಕ್ಷೆ ಶಾರದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷೆ ಕೆ.ಎಸ್. ರಮಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ನಾಯ್ಕ್, ಪ್ರೇಮಲತಾ ಎಸ್, ಬಿಜೆಪಿ ಕುಂಬಳೆ ಮಂಡಲಾಧ್ಯಕ್ಷ ಸುನಿಲ್ ಅನಂತಪುರ, ಸುಜಿತ್ ರೈ, ಶಿವಪ್ರಸಾದ್ ರೈ, ಪ್ರೇಮಾವತಿ ಶೆಟ್ಟಿ, ವಿದ್ಯಾ ಎನ್.ಪೈ, ಪ್ರೇಮಾ ವಿ.ಶೆಟ್ಟಿ, ಅಮಿತ ಆಳ್ವ ಉಪಸ್ಥಿತರಿದ್ದರು.
ಮಹಿಳಾ ಸಂಗಮಕ್ಕೂ ಮೊದಲು ಕುಂಬಳೆ ನಗರದಲ್ಲಿ ನೂರಾರು ಮಂದಿ ಮಹಿಳೆಯರನ್ನೊಳಗೊಂಡ ಮೆರವಣಿಗೆ ನಡೆಯಿತು. ಬಿಜೆಪಿ ಕುಂಬಳೆ ಮಂಡಲ ಸಮಿತಿ ಕಚೇರಿ ಆವರಣದಿಂದ ಆರಂಭಗೊಂಡ ಮೆರವಣಿಗೆ ಕುಂಬಳೆ ಸಹಕಾರಿ ಬ್ಯಾಂಕ್ ಆವರಣದಲ್ಲಿ ಕೊನೆಗೊಂಡಿತು.



