ನವದೆಹಲಿ: 'ಪಾಕಿಸ್ತಾನದ ಸೇನೆ ಮತ್ತು ತಾಲಿಬಾನ್ ನಡುವೆ ಇತ್ತೀಚೆಗೆ ನಡೆದ ಸಂಘರ್ಷದಲ್ಲಿ ಭಾರತದ ಕೈವಾಡವಿದೆ' ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ಗುರುವಾರ ತಳ್ಳಿಹಾಕಿದೆ.
'ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಎಂಬ ಸತ್ಯವನ್ನು ಅದರ ಯಾವುದೇ ರೀತಿಯ ಕಟ್ಟುಕಥೆಗಳು ಬದಲಾಯಿಸಲು ಸಾಧ್ಯವಿಲ್ಲ' ಎಂದು ಭಾರತ ಹೇಳಿದೆ.
ಭಾರತ ಮತ್ತು ಕೆನಡಾ ನಡುವಿನ ಯುರೇನಿಯಂ ಒಪ್ಪಂದವನ್ನು ಪಾಕಿಸ್ತಾನ ಟೀಕಿಸಿತ್ತು. ಆ ಟೀಕೆಯನ್ನು ಭಾರತ ತಿರಸ್ಕರಿಸಿದೆ. ಪಾಕಿಸ್ತಾನದ ಈ ಪ್ರತಿಕ್ರಿಯೆಯು 'ಹಾಸ್ಯಾಸ್ಪದ' ಮತ್ತು ತನ್ನದೇ ಆದ 'ಕಳಪೆ ದಾಖಲೆ'ಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ' ಎಂದು ಕಿಡಿಕಾರಿದೆ.
'ತನ್ನ ತಪ್ಪುಗಳಿಗೆ ಭಾರತವನ್ನು ದೂಷಿಸುವುದು ಪಾಕಿಸ್ತಾನಕ್ಕೆ ಈಗ ಸಹಜ ಪ್ರವೃತ್ತಿಯಾಗಿಬಿಟ್ಟಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

