ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸೋಮವಾರ ಟೀಕಿಸಿದ್ದಾರೆ. ಈ ವಿಷಯದ ಕುರಿತು ಸಮಗ್ರ ಚರ್ಚೆಗೆ ಆಗ್ರಹಿಸಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, 'ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಯಾವುದೇ ಚರ್ಚೆಯಿಲ್ಲದೆ ಕೇವಲ ಹೇಳಿಕೆಯನ್ನು ಓದುವುದು ಸಂಸತ್ತಿಗೆ ಮಾಡುವ ಅನ್ಯಾಯ' ಎಂದು ಕಿಡಿಕಾರಿದ್ದಾರೆ.
'ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಸದನದಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಭಾರತಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ಗಂಭೀರ ಚರ್ಚೆ ನಡೆಸುವುದು ಸಂಸತ್ತಿನ ಉದ್ದೇಶವಾಗಿದೆ. ಯಾವುದೇ ಪ್ರಶ್ನೆಗಳಿಗೆ ಅವಕಾಶ ನೀಡದೆ ಕೇವಲ ಹೇಳಿಕೆಯನ್ನು ಓದುವುದು ಮತ್ತು ನಮ್ಮ ಅಭಿಪ್ರಾಯಗಳಿಗೆ ಮನ್ನಣೆ ನೀಡದಿರುವುದು ಸದನದ ಸದಸ್ಯರಿಗೆ ಮಾಡುವ ಅನ್ಯಾಯವಾಗಿದೆ' ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಪಶ್ಚಿಮ ಏಷ್ಯಾದ ಸಂಘರ್ಷವು 'ಪಕ್ಷಪಾತದ ವಿಷಯವಲ್ಲ' ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಇಂದು ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ ಎಸ್.ಜೈಶಂಕರ್ ಅವರು, ಅಲ್ಲಿನ ಬೆಳವಣಿಗೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.
ಸಂಘರ್ಷದ ಬಗ್ಗೆ ಚರ್ಚೆಗೆ ಅವಕಾಶ ನೀಡದಿರುವುದು ಮತ್ತು ಅಡುಗೆ ಅನಿಲ ದರ ಏರಿಕೆ ಮಾಡಿರುವುದನ್ನು ಖಂಡಿಸಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿವೆ.

