ಬದಿಯಡ್ಕ: ನೀರ್ಚಾಲಿನ ಕುಮಾರಸ್ವಾಮಿ ಮಂದಿರವು ಧಾರ್ಮಿಕ ಶ್ರದ್ಧೆಗೆ ಹಿಡಿದ ಕೈಗನ್ನಡಿಯಾಗಿದೆ. ಮಂದಿರ, ದೇವಸ್ಥಾನ, ಶಾಲೆಗಳು ಸರಿಯಾಗಿದ್ದಲ್ಲಿ ಊರಿನ ಜನರು ಸಂಸ್ಕಾರವಂತರಾಗುತ್ತಾರೆ. ಧಾರ್ಮಿಕತೆ ಭಾರತೀಯ ಸಂಸ್ಕøತಿ, ಭಾರತೀಯರ ಆತ್ಮ. ಅದು ನಿರಂತರ ಮುಂದುವರಿದರೆ ಮಾತ್ರ ಭರತ ಭೂಮಿಯಲ್ಲಿ ಹಿಂದೂ ಧರ್ಮ ಉಳಿಯಲು ಸಾಧ್ಯ. ಆಧುನಿಕವಾಗಿ ಮುಂದುವರಿಯುತ್ತಾ ನಾವು ಎತ್ತ ಸಾಗುತ್ತೇವೆ ಎಂಬುದನ್ನು ಗಮನಿಸಬೇಕು. ನಮ್ಮ ಸಂಸ್ಕøತಿ ಮುಂದಿನ ಪೀಳಿಗೆಗೆ ಮುಂದುವರಿಯಬೇಕಿದ್ದರೆ ನಾವು ಮಕ್ಕಳಿಗೆ ಆದರ್ಶವಾಗಿರಬೇಕು ಎಂದು ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ತಿಳಿಸಿದರು.
ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಪುನಃಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಭಟ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸದಸ್ಯೆ ಬಿಂದ್ಯಾ ಕಾರ್ತಿಕ್, ಡಾ. ಜಯಶ್ರೀ ನಾಗರಾಜ್ ಚೇತನಡ್ಕ, ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ, ನಾರಾಯಣ ಶೆಟ್ಟಿ ಬೇಳ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಶ್ರೀ ಮಂದಿರದ ಅರ್ಚಕ ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿ, ಬಾಲಕೃಷ್ಣ ಆಚಾರ್ಯ ನೀರ್ಚಾಲು ವಂದಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾಸ್ತರ್ ನೀರ್ಚಾಲು ನಿರೂಪಿಸಿದರು.



