ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆದಿವಾಸಿಗಳ ಅಬಿವೃದ್ಧಿಯ ವೇಗವನ್ನು ಪ್ರಶ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯ ಆಜ್ಞೆಯ ಮೇರೆಗೆ ರಾಷ್ಟ್ರಪತಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
'ರಾಜ್ಯದ ಕೆಲವು ಭಾಗಗಳಲ್ಲಿರುವ ಬುಡಕಟ್ಟು ಜನಾಂಗದವರ ಅಭಿವೃದ್ಧಿ ಕುಂಠಿತಗೊಂಡಿರುವುದೇಕೆ ಎಂದು ಪ್ರಶ್ನಿಸಿದ್ದರು. ತಮ್ಮನ್ನು ಸ್ವಾಗತಿಸಲು ಯಾರೂ ಬಾರದಿರುವುದಕ್ಕೆ ಅಚ್ಚರಿಪಟ್ಟಿದ್ದ ಮುರ್ಮು ಅವರು, ಮುಖ್ಯಮಂತ್ರಿ ಅಥವಾ ಸಚಿವರು ಅಸಮಾಧಾನಗೊಂಡಿದ್ದಾರೆಯೇ' ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಕೆಲವೇ ಗಂಟಗಳ ನಂತರ ಮಮತಾ ಅವರು ಮುರ್ಮು ಅವರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
'ರಾಷ್ಟ್ರಪತಿಯವರು ಬಿಜೆಪಿಯ ಸಲಹೆಯ ಮೇರೆಗೆ ಬುಡಕಟ್ಟುಗಳ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿ, ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ' ಎಂದು ಮಮತಾ ಹೇಳಿದ್ದಾರೆ.
'ಈ ವಿಷಯವನ್ನು ಹೇಳಲು ನನಗೆ ನಾಚಿಕೆಯಾಗುತ್ತಿದೆ. ಗೌರವಾನ್ವಿತ ರಾಷ್ಟ್ರಪತಿಯವರನ್ನು ನಾವು ಗೌರವಿಸುತ್ತೇವೆ. ಆದರೆ, ಅವರನ್ನೂ ರಾಜಕೀಯ ಮಾರಾಟ ಮಾಡಲು ಕಳುಹಿಸಲಾಗುತ್ತಿದೆ. ಕ್ಷಮಿಸಿ, ಮೇಡಂ. ನನಗೆ ನಿಮ್ಮ ಬಗ್ಗೆ ಅಪಾರ ಗೌರವವಿದೆ, ಆದರೆ ನೀವು ಬಿಜೆಪಿಯ ನೀತಿಗಳು ಮತ್ತು ಅವರ ಸೂಚನೆಗಳನ್ನು ಅನುಸರಿಸುತ್ತಿದ್ದೀರಿ' ಎಂದು ಅವರು ಹೇಳಿದರು.
ಉತ್ತರ ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುರ್ಮು ಅವರ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಮತಾ, ರಾಜ್ಯ ಸರ್ಕಾರದ ಹೆಸರು ಕೆಡಿಸಲು ಬಿಜೆಪಿ, ರಾಷ್ಟ್ರಪತಿ ಕಚೇರಿಯನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
'ಬಿಜೆಪಿ ತುಂಬಾ ಕೆಳಮಟ್ಟಕ್ಕೆ ಇಳಿದಿದೆ. ರಾಜ್ಯದ ಹೆಸರು ಕೆಡಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಳಸುತ್ತಿದೆ' ಎಂದು ಮುಖ್ಯಮಂತ್ರಿ ಕೋಲ್ಕತ್ತದ ಪ್ರತಿಭಟನಾ ಸ್ಥಳದಲ್ಲಿ ಹೇಳಿದ್ದಾರೆ.
ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿನಿಧಿಗಳ ಅನುಪಸ್ಥಿತಿಯ ಬಗ್ಗೆ ತಪ್ಪಾದ ಮಾಹಿತಿ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದಿದ್ದಾರೆ
'ಬೇಕಾದರೆ ನೀವು ವರ್ಷಕ್ಕೊಮ್ಮೆ ಬನ್ನಿ, ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ, ನೀವು ಚುನಾವಣೆ ಸಂದರ್ಭದಲ್ಲಿ ಬಂದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಾಧ್ಯವಿಲ್ಲ. ಜನರ ಹಕ್ಕುಗಳಿಗೆ ಹೋರಾಟ ನಡೆಸುತ್ತಿರುವಾಗ ನಿಮ್ಮ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ' ಎಂದಿದ್ದಾರೆ.
ಇಂದು ಸಿಲಿಗುರಿ ಬಳಿಯ ಬಿಧನ್ ನಗರದಲ್ಲಿ ನೆರೆದಿದ್ದ ಆದಿವಾಸಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು, ಮಮತಾ ಬ್ಯಾನರ್ಜಿ ತಮ್ಮ ತಂಗಿಯಂತೆ ಇದ್ದರು. ಆದರೆ ಮುಖ್ಯಮಂತ್ರಿಯಾಗಲಿ ಅಥವಾ ಯಾವುದೇ ಸಚಿವರಾಗಲಿ ನನ್ನನ್ನು ಸ್ವಾಗತಿಸಲು ಹಾಜರಿಲ್ಲದೆ ಇರುವುದನ್ನು ನೋಡಿದರೆ ಮಮತಾ ನನ್ನ ಬಗ್ಗೆ ಅಸಮಾಧಾನಗೊಂಡಿದ್ದಾರೆಯೇ ಎಂದು ನನಗೆ ಅನಿಸುತ್ತಿದೆ ಎಂದಿದ್ದರು.

