ನವದೆಹಲಿ: ಭಾರತದ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ ಮತ್ತು ಈ ಬೆಳವಣಿಗೆಯ ಪಥವನ್ನು ದೇಶವು ತನ್ನ ಸಾಮರ್ಥ್ಯದ ಆಧಾರದ ಮೇಲೆ ಮಾತ್ರ ನಿರ್ಧರಿಸುತ್ತದೆಯೇ ಹೊರತು ಇತರರ ತಪ್ಪುಗಳಿಂದ ಅಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.
ಇತ್ತೀಚೆಗಿನ ರೈಸಿನಾ ಸಂವಾದದಲ್ಲಿ ಅಮೆರಿಕದ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಅವರು, 'ಚೀನಾಕ್ಕೆ ಅಮೆರಿಕ ನೀಡಿದ ಆರ್ಥಿಕ ನೆರವು, ಆ ದೇಶ ಅಮೆರಿಕದ ಪ್ರಮುಖ ಪ್ರತಿಸ್ಪರ್ಧಿಯಾಗಲು ಸಹಾಯ ಮಾಡಿತು.
ಇಂಥ ಆರ್ಥಿಕ ನೆರವನ್ನು ಭಾರತಕ್ಕೆ ಒದಗಿಸುವಂತಹ ತಪ್ಪನ್ನು ಅಮೆರಿಕ ಪುನರಾವರ್ತಿಸುವುದಿಲ್ಲ' ಎಂದು ಹೇಳಿಕೆ ನೀಡಿದ ಎರಡು ದಿನಗಳ ನಂತರ ಜೈಶಂಕರ್ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ರೈಸಿನಾ ಸಂವಾದಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ದೇಶಗಳ ನಡುವಿನ ಸಹಕಾರದ ಕುರಿತ ಚರ್ಚೆಯಲ್ಲಿ ಜೈಶಂಕರ್ ಅವರು, 'ನಾವು ಇಂದು ದೇಶಗಳ ಬೆಳವಣಿಗೆ ಬಗ್ಗೆ ಮಾತನಾಡುವಾಗ, ತಮ್ಮ ಬೆಳವಣಿಗೆಯನ್ನು ಆ ದೇಶಗಳೇ ನಿರ್ಧರಿಸುತ್ತವೆ. ಭಾರತದ ಬೆಳವಣಿಗೆಯನ್ನು ಭಾರತವೇ ನಿರ್ಧರಿಸುತ್ತದೆ' ಎಂದು ಹೇಳಿದರು.
'ಈ ಬೆಳವಣಿಗೆಗಳು ನಮ್ಮ ಶಕ್ತಿಯಿಂದ ನಿರ್ಧಾರವಾಗುತ್ತವೆಯೇ ಹೊರತು, ಇತರರ ತಪ್ಪುಗಳಿಂದಲ್ಲ' ಎಂದು ಅವರು ಯಾವುದೇ ದೇಶವನ್ನು ಹೆಸರಿಸದೆ ಹೇಳಿದರು.
'ಇರಾನ್ 'ಲವಣ್' ನಿಲುಗಡೆಗೆ ಭಾರತ ಅನುಮೋದನೆ'
ಕೊಚ್ಚಿಯಲ್ಲಿ ಇರಾನಿನ ನೌಕೆ 'ಐಆರ್‌ಐಎಸ್ ಲವಣ್' ಅನ್ನು ತುರ್ತು ನಿಲುಗಡೆಗೆ ಭಾರತದ ಅನುಮೋದಿಸಿದೆ ವಿದೇಶಾಂಗ ಸಚಿವ ಜೈಶಂಕರ್ ದೃಢಪಡಿಸಿದರು. 'ನಮ್ಮ ಗಡಿಗಳಿಗೆ ಹತ್ತಿರದ ಪ್ರದೇಶದಲ್ಲಿದ್ದ ನಮ್ಮ ದೇಶದ ಹಡಗುಗಳಲ್ಲಿ ಒಂದು ಹಡಗು ನಮ್ಮ ಬಂದರಿಗೆ ಬರಲು ಬಯಸಿದೆ ಎಂದು ಇರಾನ್ ಕಡೆಯಿಂದ ನಮಗೆ ಸಂದೇಶ ಬಂದಿತ್ತು. ಹಡಗಿನಲ್ಲಿದ್ದವರು ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ ಎಂದೂ ಸಂದೇಶದಲ್ಲಿ ತಿಳಿಸಿದ್ದರು. 'ಇರಾನ್ ನೌಕೆಗೆ ಮಾರ್ಚ್ 1 ರಂದು ನಮ್ಮ ಗಡಿ ಪ್ರದೇಶದೊಳಗೆ ಬರಲು ತಿಳಿಸಿದೆವು . ಅವರು ನಮ್ಮ ಗಡಿ ಪ್ರದೇಶ ತಲುಪಲು ಕೆಲವು ದಿನಗಳನ್ನು ತೆಗೆದುಕೊಂಡರು. ನಂತರ ಕೊಚ್ಚಿಯ ಬಂದರು ತಲುಪಿದರು' ಎಂದು ಅವರು ವಿವರಿಸಿದರು.
ಅಮೆರಿಕವು ಇರಾನಿನ ಯುದ್ಧನೌಕೆ ಐಆರ್‌ಐಎಸ್ ದೇನಾ ಮೇಲೆ ದಾಳಿ ಮಾಡಿ ಮುಳುಗಿಸುವ ಕೆಲವು ದಿನಗಳ ಮೊದಲು ಆ ಹಡಗನ್ನು ಲಂಗರು ಹಾಕಲು ಮಾಡಿದ್ದ ವಿನಂತಿಯನ್ನು ಭಾರತೀಯ ನೌಕಾಪಡೆಯು ಅನುಮೋದಿಸಿತ್ತು. ಐಆರ್‌ಐಎಸ್ ಲವನ್ ಹಡಗು ಮಾರ್ಚ್ 4 ರಂದು ಕೊಚ್ಚಿಯಲ್ಲಿ ಬಂದಿಳಿದಿದೆ. ಅದರಲ್ಲಿದ್ದ 183 ಸಿಬ್ಬಂದಿಯನ್ನು ಪ್ರಸ್ತುತ ಮಾನವೀಯ ಆಧಾರದ ಮೇಲೆ ಭಾರತೀಯ ನೌಕಾ ಸೌಲಭ್ಯಗಳಲ್ಲಿ ಇರಿಸಲಾಗಿದೆ.

