ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕಾರಣದಿಂದಾಗಿ ಇಂಧನ ದರ ಏರಿಕೆಯ ಆತಂಕ ಸೃಷ್ಟಿಯಾಗಿರುವುದರ ನಡುವೆ, ಕೇಂದ್ರ ಸರ್ಕಾರವು ದೇಶದ ಜನರಿಗೆ ಗುಡ್ ನ್ಯೂಸ್ ನೀಡಿದೆ.
ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಪೆಟ್ರೋಲ್‌ಗೆ ₹ 3ಕ್ಕೆ ಹಾಗೂ ಪ್ರತಿ ಲೀಟರ್ ಡೀಸೆಲ್‌ಗೆ ಶೂನ್ಯಕ್ಕೆ ಇಳಿಸಿ ಪ್ರಕಟಣೆ ಹೊರಡಿಸಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ, ಬೆಲೆ ಏರಿಕೆ ಹೊರೆಯಿಂದ ಜನರಿಗೆ ನಿರಾಳ ನೀಡುವ ಸಾಧ್ಯತೆ ಇದೆ.
ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್‌ಗೆ ₹ 13 ಹಾಗೂ ಪ್ರತಿ ಲೀಟರ್ ಡೀಸೆಲ್‌ಗೆ ₹ 10 ಅಬಕಾರಿ ಸುಂಕ ಇತ್ತು.
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ದಾಳಿ ಮಾಡಿದಾಗಿನಿಂದ ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ಸೃಷ್ಟಿಯಾಗಿದೆ. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಿಂದ ಕೆರಳಿರುವ ಇರಾನ್, ಹೊರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಿದ್ದು, ತೈಲ ಸಾಗಣೆ ಹಡಗುಗಳ ಸಂಚಾರವನ್ನು ನಿರ್ಬಂಧಿಸಿವೆ.
ಇದರಿಂದಾಗಿ, ಭಾರತದಲ್ಲೂ ತೈಲ ವ್ಯತ್ಯಯದ ಆತಂಕ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಲಿದೆ ಎನ್ನಲಾಗಿತ್ತು.
ಖಾಸಗಿ ವಲಯದ ಅತಿದೊಡ್ಡ ತೈಲೋತ್ಪನ್ನ ಮಾರಾಟ ಕಂಪನಿ ನಯಾರಾ ಎನರ್ಜಿ, ಗುರುವಾರವಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ₹ 5 ಹಾಗೂ ₹ 3 ರಷ್ಟು ಹೆಚ್ಚಿಸಿತ್ತು.

